ಗದಗ :ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವಿನ ಗಲಾಟೆಯಿಂದಾಗಿ ಜಿಲ್ಲೆಯ ಮತಗಟ್ಟೆವೊಂದರಲ್ಲಿ 2ನೇ ಹಂತದ ಗ್ರಾಪಂ ಚುನಾವಣಾ ಮತದಾನ ಸ್ಥಗಿತಗೊಂಡಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆ ರೋಣ ತಾಲೂಕಿನ ಮೆಣಸಗಿ ಗ್ರಾಮದ ಮತಗಟ್ಟೆವೊಂದರಲ್ಲಿ ಈ ಘಟನೆ ನಡೆದಿದ್ದು, ಮೆಣಸಗಿ ಗ್ರಾಮ ಪಂಚಾಯತ್‌ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿ ಜಿಪಂ ಸದಸ್ಯ ಶಿವಕುಮಾರ್ ನೀಲಗುಂದ ಅವರು ಮತದಾನ ಮಾಡಲು ಹೋಗಿದ್ದ ವೇಳೆ ಮತಗಟ್ಟೆಯ ಏಜೆಂಟ್ ಅಲ್ಲದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ.
ಓದಿ: ಗ್ರಾಪಂ ಚುನಾವಣೆಗೆ 2ನೇ ಹಂತದ ಮತದಾನ : ಡಿಸಿಎಂ ಲಕ್ಷ್ಮಣ್ ಸವದಿ ಹಕ್ಕು ಚಲಾವಣೆ
ಜಿಪಂ ಸದಸ್ಯರ ಮೇಲೆ ಕಾಂಗ್ರೆಸ್ ಮುಖಂಡ ಹಿರೇಗೌಡರ ಸಹೋದರರು ಹಲ್ಲೆ ನಡೆಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯವೇ ಈ ಗಲಾಟೆಗೆ ಕಾರಣ ಎನ್ನಲಾಗುತ್ತಿದೆ. ನಮ್ಮ ಬೆಂಬಲಿತ ಅಭ್ಯರ್ಥಿಗೆ ಮತ ಹಾಕುವಂತೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ನೂಕಾಟ-ತಳ್ಳಾಟ ನಡೆದಿದೆ.
ಇದರಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚಿನ ಸಂಖ್ಯೆಯ ಪೊಲೀಸರು ಗ್ರಾಮಕ್ಕೆ ದೌಡಾಯಿಸಿದ್ದಾರೆ. ಗ್ರಾಮದಲ್ಲಿ ಸೂಕ್ತ ಬಂದೋಬಸ್ತ್ ಮಾಡಿದ್ದು ಶಾಂತಿ ಕಾಪಾಡುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.