ಗದಗ: ಶಾಲೆಗೆ ಹೊರಟಿದ್ದ ಬಾಲಕಿಯೋರ್ವಳನ್ನು ಚುಡಾಯಿಸಿ ಕಿರುಕುಳ ನೀಡಿದ್ದ ಯುವಕರಿಬ್ಬರಿಗೆ ಶಿಕ್ಷೆ ಪ್ರಕಟಿಸಿ ಗದಗ ಜಿಲ್ಲಾ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ಸುಮಾರು 3 ವರ್ಷದ ಹಿಂದೆ ನಡೆದಿದ್ದ ಘಟನೆಗೆ ಇಂದು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ಘೋಷಿಸಿದೆ. ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ.ವಿ ನರಸಿಂಹಸಾ ಶಿಕ್ಷೆ ಘೋಷಿಸಿದ್ದಾರೆ. ವಿಶೇಷ ಸರಕಾರಿ ಅಭಿಯೋಜಕ ಅಮರೇಶ್ ಹಿರೇಮಠ ವಾದ ಮಂಡಿಸಿದ್ದರು. ಭವಾನಿಸಾಬ ಅಲಿಸಾಬ್ ಹೊಸಳ್ಳಿ ಎಂಬ ಅಪರಾಧಿಗೆ 24 ದಿನದ ಜೈಲು ಶಿಕ್ಷೆ ಮತ್ತು 500 ರೂ. ದಂಡ ವಿಧಿಸಲಾಗಿದೆ.
ಸಂತ್ರಸ್ತ ಬಾಲಕಿಗೆ 15 ಸಾವಿರ ರೂ. ಪರಿಹಾರ ನೀಡಬೇಕು ಎಂದೂ ಕೂಡ ಆದೇಶದಲ್ಲಿ ಹೇಳಿದೆ. ಈತನಿಗೆ ನೆರವಾಗಿದ್ದ ಇನ್ನೊಬ್ಬ ಯುವಕ ರಮೇಶ ವೀರನಗೌಡ ಹನುಮಂತಗೌಡ್ರ ಎಂಬಾತನಿಗೆ 100 ರೂ. ದಂಡ ವಿಧಿಸಲಾಗಿದೆ.
ಏನಿದು ಘಟನೆ:
ಸುಮಾರು 3 ವರ್ಷದ ಹಿಂದೆ ಅಂದ್ರೆ 14-11-2017 ರಂದು ಮಧ್ಯಾಹ್ನ ಬೆಟಗೇರಿ ಠಾಣೆ ವ್ಯಾಪ್ತಿಯ ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಘಟನೆ ನಡೆದಿತ್ತು. ಶಾಲೆ ಮುಗಿಸಿಕೊಂಡು ತಮ್ಮ ಗ್ರಾಮದತ್ತ ಹೊರಟಿದ್ದ ಸಂತ್ರಸ್ತ ಬಾಲಕಿ ಮತ್ತು ಆಕೆಯ ಇಬ್ಬರು ಗೆಳತಿಯರನ್ನು ಬೈಕ್ ಮೇಲೆ ಬಂದ ಮೂವರು ಆರೋಪಿಗಳು ಚುಡಾಯಿಸಿದ್ದರು. ಬೈಕ್ ಓಡಿಸುತ್ತಿದ್ದ ರಮೇಶ ವೀರನಗೌಡ ಹನುಮಂತಗೌಡ್ರ, ಹಿಂದೆ ಕುಳಿತಿದ್ದ ಭವಾನಿಸಾಬ್ ಅಲಿಸಾಬ್ ಹೊಸಳ್ಳಿ ಮತ್ತು ಮಂಜುನಾಥ್ ಮಲ್ಲಪ್ಪ ಮಣ್ಣೂರ ಇವರೇ ಆರೋಪಿಗಳಾಗಿದ್ದು, ಇದರಲ್ಲಿ 2ನೇಯವನಾದ ಭವಾನಿಸಾಬ್, ಸಂತ್ರಸ್ತ ಬಾಲಕಿಯನ್ನು ರೇಗಿಸಿದ್ದ. ಬಾಲಕಿ ಪ್ರತಿರೋಧಿಸಿ, ತಮ್ಮಪ್ಪನಿಗೆ ಹೇಳ್ತೀನಿ ಎಂದಾಗ ಜೀವ ಬೆದರಿಕೆ ಹಾಕಿದ್ದರು.
ಬಾಲಕಿ ತಂದೆ ಅದೇ ಗ್ರಾಮದ ಆರೋಪಿಯೊಬ್ಬನ ತಾಯಿಗೆ ಈ ವಿಷಯ ತಿಳಿಸಿದ್ದರು. ಇದರಿಂದ ಕೋಪಗೊಂಡ ರಮೇಶ ಮತ್ತು ಭವಾನಿಸಾಬ್ ಅಂದೇ ಸಾಯಂಕಾಲ ಬಾಲಕಿ ತಂದೆ ಜೊತೆ ಜಗಳ ತೆಗೆದು ಅವರ ಮೇಲೆ ಹಲ್ಲೆ ನಡೆಸಿದ್ದರು. ಹೀಗಾಗಿ ಈ ಘಟನೆ ಕುರಿತು ಬಾಲಕಿ ತಂದೆ ಬೆಟಗೇರಿ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆಗಿನ ಪಿಎಸ್‌ಐ ಎಂ.ಡಿ. ಮಡ್ಡಿ ಐಪಿಸಿ ಕಲಂ 354, 323, 504, 506, 34 ಮತ್ತು ಪೊಕ್ಸೊ-2012 ಕಾಯ್ದೆ ಕಲಂ 18 ಮತ್ತು 128(1), 177 ಎಂವಿ ಕಾಯ್ದೆ ಪ್ರಕಾರ ಕೇಸು ಹಾಕಿ ತನಿಖೆ ನಡೆಸಿ, ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.