ಗದಗ:ಇಂದು ದ್ವೀತಿಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಗದಗನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಹೈ ಟೆಂಪರೇಚರ್ ಕಂಡು ಬಂದಿದೆ. ಗದಗ ನಗರದ ಜೆಟಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡುವ ವೇಳೆ ಇಬ್ಬರು ವಿದ್ಯಾರ್ಥಿಗಳಿಗೆ ಟೆಂಪರೇಚರ್ ಜಾಸ್ತಿಯಾಗಿರೋದು ಕಂಡು ಬಂದಿದೆ.
ಹಾಗಾಗಿ ಇಬ್ಬರು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, ವಿದ್ಯಾರ್ಥಿಗಳನ್ನು ಭೇಟಿ ಮಾಡಿದ ಡಿಸಿ ಎಂ ಜಿ ಹಿರೇಮಠ ವಿದ್ಯಾರ್ಥಿಗಳಿಗೆ ಧೈರ್ಯ ಹೇಳಿದ್ದಾರೆ.
ಇಬ್ಬರು ವಿದ್ಯಾರ್ಥಿಗಳಿಗೆ ಹೈ ಟೆಂಪರೇಚರ್ ಗದಗ ಜಿಲ್ಲೆಯಲ್ಲಿ ಒಟ್ಟು 11081 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. 11081 ವಿದ್ಯಾರ್ಥಿಗಳ ಪೈಕಿ, ಬೇರೆ ಬೇರೆ ಜಿಲ್ಲೆಗಳಿಂದ ಬಂದ, 541 ವಿದ್ಯಾರ್ಥಿಗಳು ಹಾಗೂ ಹೊರ ರಾಜ್ಯದಿಂದ ಬಂದ ಓರ್ವ ವಿದ್ಯಾರ್ಥಿ ಪರೀಕ್ಷೆ ಬರೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 19 ಪರೀಕ್ಷಾ ಕೇಂದ್ರಗಳು ಇದ್ದು, ಗದಗ - 08, ರೋಣ - 02, ಗಜೇಂದ್ರಗಡ - 03, ನರಗುಂದ -02, ಮುಂಡರಗಿ - 02, ಲಕ್ಷ್ಮೇಶ್ವರ -02, ಹಾಗೂ ಶಿರಹಟ್ಟಿ - 01 ಪರೀಕ್ಷಾ ಕೇಂದ್ರಗಳನ್ನು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಕೊರೊನಾ ಸಂಬಂಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗಿದೆ.
ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯವಾಗಿದೆ. ಜೊತೆಗೆ ಮುಂಜಾನೆ 9 ರಿಂದ ಮಧ್ಯಾಹ್ನ 2ಗಂಟೆಯವರೆಗೆ ಡಿಸಿ ಪ್ರತಿಬಂಧಕಾಜ್ಞೆ ಘೋಷಿಸಿದ್ದಾರೆ.
ಗದಗ ಮುನಿಸಿಪಲ್ ಕಾಲೇಜು ಆವರಣದಲ್ಲಿ ಸೆಕ್ಷನ್ 144 ನಿಯಮ ಉಲ್ಲಂಘನೆ ಮಾಡಿರೋದು ಕಂಡುಬಂತು. ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಿದ್ರೂ ಮೈದಾನದಲ್ಲಿ ಆಟವಾಡಿತ್ತಿರೋ ದೃಶ್ಯಗಳು ಕಂಡು ಬಂತು. ಪರೀಕ್ಷಾ ಕೇಂದ್ರ ಇರೋ ಕಾಲೇಜು ಮೈದಾನದಲ್ಲಿಯೇ ಕ್ರಿಕೆಟ್ ಆಟ ಆಡಿ ಬೇಜವಾಬ್ದಾರಿ ಪ್ರದರ್ಶಿಸಿದರು.
ರೋಣ ಪಟ್ಟಣದಲ್ಲೂ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಚರ್ಚೆಯಲ್ಲಿ ತೊಡಗಿದ್ದರು. ಯಾವುದೇ ಸಾಮಾಜಿಕ ಅಂತರ ಇಲ್ಲದೇ ಗುಂಪಾಗಿ ಜಮಾಯಿಸಿದ್ದರು. ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಹೇಳೋರು ಯಾರೂ ಇಲ್ಲ ಅನ್ನುವಂತಿತ್ತು.