ಗದಗ: ಕೊರೊನಾ ಅಟ್ಟಹಾಸದ ನಡುವೆ ಗದಗದ ಕರ್ನಾಟಕ ಗೃಹ ಮಂಡಳಿ ಕಚೇರಿ ಸಿಬ್ಬಂದಿ ಬೇಜವಾಬ್ದಾರಿತನ ತೋರಿದ್ದು, ಮೂಲಭೂತ ಸೌಲಭ್ಯ ಇಲ್ಲದೆ ನಿವೇಶನಗಳನ್ನು ಹರಾಜು ಹಾಕಲು ಹೊರಟಿರುವ ಆರೋಪ ಕೇಳಿ ಬಂದಿದೆ.
ಗೃಹ ಮಂಡಳಿ ನಿವೇಶನ ಹರಾಜು ಪ್ರಕ್ರಿಯೆ ವೇಳೆ ಸಾಮಾಜಿಕ ಅಂತರ ಮರೆತ ಜನ - ನಿವೇಶನಗಳ ಹರಾಜು
ಕೊರೊನಾ ಬಿಕ್ಕಟ್ಟಿನ ಮಧ್ಯೆ ಗದಗದಲ್ಲಿನ ಕರ್ನಾಟಕ ಗೃಹ ಮಂಡಳಿ ನಿವೇಶನ ಹರಾಜು ಪ್ರಕ್ರಿಯೆಯಲ್ಲಿ ನಿರತವಾಗಿದ್ದು, ಸಾಮಾಜಿಕ ಅಂತರದ ನಿಯಮಗಳನ್ನು ಗಾಳಿಗೆ ತೂರಿ ಮೂಲಭೂತ ಸೌಲಭ್ಯಗಳಿಲ್ಲದ ನಿವೇಶನಗಳನ್ನು ಹರಾಜು ಹಾಕಲು ಮುಂದಾಗಿದೆ.
ನಗರದ ಮುಳಗುಂದ ರಸ್ತೆಯಲ್ಲಿರುವ ಕರ್ನಾಟಕ ಗೃಹ ಮಂಡಳಿ ಕಚೇರಿಯಲ್ಲಿ ನಿವೇಶನಗಳ ಹರಾಜು ಪ್ರಕ್ರಿಯೆ ಹಮ್ಮಿಕೊಳ್ಳಲಾಗಿತ್ತು. ಈ ಹರಾಜು ಪ್ರಕ್ರಿಯೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನ ಮರೆತ ಜನರು, ಗುಂಪು ಗುಂಪಾಗಿ ನಿವೇಶನ ಹರಾಜಿನಲ್ಲಿ ಕೂಗತೊಡಗಿದ್ದರು. ಈಗಾಗಲೇ ಪಡೆದ ನಿವೇಶನದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದ್ದು, ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದು ಕಾಣುತ್ತಿದ್ದರೂ ಸಹ ಗೃಹ ಮಂಡಳಿ ಸಿಬ್ಬಂದಿ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಗದಗ ಜಿಲ್ಲೆಯಲ್ಲಿ 174 ಸೋಂಕಿತರಿದ್ದರೂ ಸಹ ಗೃಹ ಮಂಡಳಿ ನಿವೇಶನ ಹರಾಜು ಪ್ರಕ್ರಿಯೆಗೆ ಕರೆ ನೀಡಿದೆ. ಅಲ್ಲದೆ ಈ ವೇಳೆ ಯಾವುದೇ ಮುಂಜಾಗ್ರತಾ ಕ್ರಮ ಅನುಸರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.