ಗದಗ:ಇಲ್ಲಿನ ಪೊಲೀಸರು 2020ನೇ ವರ್ಷದಲ್ಲಿ ಕಳವಾಗಿದ್ದ ಚಿನ್ನಾಭರಣಗಳನ್ನು ಮರಳಿಸುವ ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ವಾಪಸ್ ಹಿಂತಿರುಗಿಸಿದ್ದಾರೆ.
ಗದಗದ ಪೊಲೀಸ್ ಭವನದಲ್ಲಿ ನಡೆದ ಪ್ರಾಪರ್ಟಿ ಪರೇಡ್ನಲ್ಲಿ ಕಳ್ಳತನವಾಗಿದ್ದ ಸುಮಾರು 39 ಲಕ್ಷದ 24 ಸಾವಿರ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೈಕ್ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಮರಳಿಸಿದ್ದಾರೆ.
ಗದಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕಳ್ಳತನದ ಸುಮಾರು 50 ಪ್ರಕರಣಗಳನ್ನು ಪೊಲೀಸರು ಬೇಧಿಸಿ, 656 ಗ್ರಾಂ ಚಿನ್ನಾಭರಣ, 2 ಕೆಜಿ 265 ಗ್ರಾಂ ಬೆಳ್ಳಿ, 23 ಬೈಕ್ ಹಾಗೂ ನಾಲ್ಕು ವಾಹನಗಳು ಕಳ್ಳರಿಂದ ಜಪ್ತಿ ಮಾಡಿ ಪ್ರಾಪರ್ಟಿ ರಿಟರ್ನ್ ಪರೇಡ್ನಲ್ಲಿ ಫಲಾನುಭವಿಗಳಿಗೆ ವಾಪಸ್ ಮಾಡಿದ್ದಾರೆ.
ಇನ್ನು ಆಭರಣ, ಹಣ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ವಾರಸುದಾರರ ಮುಖದಲ್ಲಿ ಮಂದಹಾಸ ಮೂಡಿತ್ತು. ಕಷ್ಟ ಪಟ್ಟು ದುಡಿದು ಕೂಡಿಟ್ಟಿದ್ದ ಹಣ. ಚಿನ್ನ, ಬೆಳ್ಳಿ ಮತ್ತು ವಾಹನಗಳನ್ನು ಪಡೆದ ವಾರಸುದಾರರು ಪೊಲೀಸರ ಕಾರ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ.
ಒಟ್ಟಿನಲ್ಲಿ ಹಣ ಚಿನ್ನಾಭರಣ ಕಳೆದುಕೊಂಡು ಪರದಾಡಿದ್ದ ಗದಗನ ಜನರಿಗೆ ಅವರ ವಸ್ತುಗಳನ್ನು ಮರುಕಳಿಸಿ ಪೊಲೀಸರು ಅವರ ಮನ ಗೆದ್ದಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಕನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.