ಗದಗ :ವಿದ್ಯಾರ್ಥಿಗಳಿಗೆ ಆದರ್ಶದ ಪಾಠ ಮಾಡುವ ಪ್ರೊಫೆಸರ್ ವೊಬ್ಬರು ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಕೆಲಸ ಮಾಡಿದ್ದಾರೆ. ಗಂಡು ಮಗು ಜನಿಸಿಲ್ಲ ಎಂಬ ಕಾರಣಕ್ಕೆ ಪ್ರೀತಿ ಮಾಡಿ ಮದುವೆಯಾದ ಪತ್ನಿಗೆ ಮೋಸ ಮಾಡಿ 2ನೇ ಮದುವೆಯಾಗಿದ್ದಾರೆ.
ಗಂಡನ ಈ ಮೋಸದಿಂದ ಕಂಗೆಟ್ಟ ಮೊದಲ ಪತ್ನಿ ಮೂವರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡರೂ ಯಾವುದೇ ಕ್ರಮ ಜರುಗಿಸದೆ ಸುಮ್ಮನಾಗಿದ್ದಾರೆ.
ಆರೋಪಿ ಹೆಸರು ಷಣ್ಮುಖಪ್ಪ ಕಾರಭಾರಿ. ಇವರು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು ಕಳೆದ 10 ವರ್ಷಗಳ ಹಿಂದೆ ತಾಲೂಕಿನ ಅಡವಿ ಸೋಮಾಪುರ ತಾಂಡಾದ ಸರೋಜಾ ಎನ್ನುವ ಮಹಿಳೆಯನ್ನ ಪ್ರೀತಿಸುವಂತೆ ದುಂಬಾಲು ಬಿದ್ದು ಮದುವೆಯಾಗಿದ್ದಾರೆ. ತಂದೆ-ತಾಯಿಗೆ ಸರೋಜಾ ಒಬ್ಬಳೇ ಹೆಣ್ಣು ಮಗಳು ಆಗಿದ್ದರಿಂದ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದಾರೆ.
ಮದುವೆ ಸಮಯದಲ್ಲಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ಕೊಟ್ಟಿದ್ದಾರೆ. ನಂತರ ಆರೇಳು ವರ್ಷ ಸುಂದರ ಸಂಸಾರ ಮಾಡಿದ್ದಾರೆ. ಈ ವೇಳೆ ದಂಪತಿಗೆ ಮೂವರು ಮುದ್ದಾದ ಹೆಣ್ಣು ಮಕ್ಕಳು ಜನಿಸಿವೆ. ಆದರೆ, ಷಣ್ಮುಖಪ್ಪ ಕಾರಭಾರಿ ಮಾತ್ರ ತನಗೆ ಗಂಡು ಮಕ್ಕಳು ಬೇಕು ಎಂದು ನಿತ್ಯ ಕುಡಿದು ಬಂದು ಪತ್ನಿಗೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ಹೀಗಿದ್ದರೂ ಪತ್ನಿ ಕಿರುಕುಳ ಸಹಿಸಿಕೊಂಡು ಜೀವನ ನಡೆಸಿದ್ದಾರೆ. ಆದರೆ, ಈಗ ಗಂಡು ಮಗುವಿಗಾಗಿ ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ ಎನ್ನುವ ಸತ್ಯ ಸರೋಜಾ ಅವರಿಗೆ ಗೊತ್ತಾಗಿದೆ. ಇದರಿಂದಾಗಿ ಗಂಡನ ವಿರುದ್ಧ ಸಿಡಿದು ಬಿದ್ದ ಪತ್ನಿ, ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. 10 ವರ್ಷ ಸಂಸಾರ ಮಾಡಿದ ಗಂಡನ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.