ಗದಗ :ಪೋಕ್ಸೋ ಕಾಯ್ದೆಯಡಿ ಗದಗ ಜಿಲ್ಲಾ ಕಾರಾಗೃಹದ ಪಾಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಕಟ್ಟಡದ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ. ಗದಗ ತಾಲೂಕಿನ ಅಡವಿ ಸೋಮಾಪುರ ತಾಂಡಾದ ನಿವಾಸಿ ರಾಜು ಪಾಂಡಪ್ಪ ಲಮಾಣಿ (19) ಆತ್ಮಹತ್ಯೆಗೆ ಶರಣಾದ ಯುವಕ.
ಶುಕ್ರವಾರ ಮಧ್ಯರಾತ್ರಿ 1.30ರ ಸುಮಾರಿಗೆ ಕಾರಾಗೃಹದಲ್ಲಿರುವ ಇನ್ನಿತರ ಕೈದಿಗಳ ಟವೆಲ್ ತೆಗೆದುಕೊಂಡು ಮೊದಲ ಬಾರಿಗೆ ಪ್ರಯತ್ನಿಸುತ್ತಾನೆ. ಸಾಧ್ಯವಾಗದಿದ್ದಾಗ ಪುನಃ ಎರಡನೇ ಬಾರಿಗೆ ಪ್ರಯತ್ನಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ದೃಶ್ಯ ಕಾರಾಗೃಹದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಹುಡುಗಿಯ ಮನೆಯವರು ಗುರುವಾರ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿ, ಜಾಮೀನು ಮೇಲೆ ಬಿಡುಗಡೆಯಾದರೂ ನಿನ್ನನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದಾರೆ. ಇದರಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ ಆತ್ಮಹತ್ಯೆಗೆ ಜೈಲು ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವೆಂದು ದೂರಿದ್ದಾರೆ.
ಅಡವಿ ಸೋಮಾಪುರ ಗ್ರಾಮದ ರಾಜು ಪಾಂಡಪ್ಪ ಲಮಾಣಿ ಅದೇ ಊರಿನ ಹುಡುಗಿಯನ್ನು ಪ್ರೀತಿಸಿದ್ದ. ಹುಡುಗಿ ಕಾಣೆಯಾಗಿದ್ದಾಳೆಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ 8 ದಿನಗಳ ಬಳಿಕ ಸಿಕ್ಕ ಹುಡುಗಿಯನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು 161 ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ಹೇಳಿಕೆಯಲ್ಲಿ 'ರಾಜು ನಾನು ಬೆಂಗಳೂರು, ಗೋವಾಕ್ಕೆ ಹೋಗಿದ್ದೆವು. ಹೋದಲ್ಲೆಲ್ಲ ಜೊತೆಗಿದ್ದೇವೆ ಎಂದು ಹೇಳಿದ್ದಾಳೆ.
ಆದರೆ, ನ್ಯಾಯಾಧೀಶರ ಮುಂದೆ 164ರಡಿ ಹೇಳಿಕೆ ದಾಖಲಿಸಿದ್ದು, 'ನಾನು ಗೆಳತಿಯರೊಂದಿಗೆ ಹೋಗಿದ್ದೆ. ರಾಜು ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಳು'. ಇದಾದ ಬಳಿಕ ಯುವಕನ ಪೋಷಕರು ಜಾಮೀನು ಅರ್ಜಿ ಸಲ್ಲಿಸಿ, ಬಳಿಕ ಸಾಕ್ಷಿದಾರರಿಗೆ ನೋಟಿಸ್ ನೀಡಲಾಗಿದೆ.