ಗದಗ :ಕರ್ನಾಟಕ ಪಶ್ಚಿಮ ಪದವೀಧರರ ಮತ ಕ್ಷೇತ್ರ ಚುನಾವಣೆ ನಡೆಯಲಿದ್ದು, ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸುವುದರ ಜೊತೆಗೆ ಮುಕ್ತ, ನಿಷ್ಪಕ್ಷಪಾತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೊರೊನಾ ಸೋಂಕು ನಿಯಂತ್ರಿಸಲು ಚುನಾವಣಾ ಆಯೋಗದ ನಿರ್ದೇಶನದಂತೆ ಎಲ್ಲ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಮೊದಲಾದ್ಯತೆ ನೀಡಲಾಗಿದೆ. ಮತಗಟ್ಟೆಗಳಲ್ಲಿ ಮತದಾರರ ಮಧ್ಯೆ ವ್ಯಕ್ತಿಗತ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಪ್ರತಿಯೊಬ್ಬರೂ ಮಾಸ್ಕ್ ಧರಿಸುವಂತೆ ಸೂಚಿಸಲಾಗಿದ್ದು, ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.
ಅಲ್ಲದೇ, ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಮತಗಟ್ಟೆಗಳಲ್ಲಿ ಜನಸಂದಣಿ ಆಗದಂತೆ ಕ್ರಮ ಕೈಗೊಳಲಾಗಿದೆ. ಇನ್ನು ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಯಲು ಮತ್ತು ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವ ಸಲುವಾಗಿ ಜಿಲ್ಲೆಯಾದ್ಯಂತ ಅಕ್ಟೋಬರ್ 28ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಗುಂಪುಗೂಡುವಿಕೆಯನ್ನು ತಡೆಗಟ್ಟಲು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಮತದಾರರಿಗೆ ಅಡಚಣೆ ಆಗಬಾರದೆಂಬ ಕಾರಣಕ್ಕೆ ಮತದಾನದಂದು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಸಂತೆ, ಜಾತ್ರೆ ಅಥವಾ ಉತ್ಸವಗಳನ್ನು ರದ್ದುಪಡಿಸಲಾಗಿದೆ.
ತಾಲೂಕುವಾರು ಮತದಾರರ ವಿವರ : ಜಿಲ್ಲೆಯಾದ್ಯಂತ ಒಟ್ಟು 29 ಮತಗಟ್ಟೆಗಳಿದ್ದು, ಗದಗ 7711, ಮುಂಡರಗಿ 1318, ನರಗುಂದ 1176, ರೋಣ 1512, ಗಜೇಂದ್ರಗಡ 2122, ಶಿರಹಟ್ಟಿ 1063 ಹಾಗೂ ಲಕ್ಷ್ಮೇಶ್ವರ 1076 ಸೇರಿ ಪುರುಷರು 10,979, ಮಹಿಳೆಯರು 4,998 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 15,978 ಮತದಾರರಿದ್ದಾರೆ.