ಗದಗ:ಜಿಲ್ಲೆಯ ಕನಗಿನಹಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟದಲ್ಲಿ ಸಾಕಷ್ಟು ಸೊಳ್ಳೆಗಳು ಕಂಡು ಬಂದಿದೆ.
ಅಡುಗೆ ಸಹಾಯಕಿಯರು ಅಡುಗೆಗೆ ಬಳಸುವ ಧವಸ ಧಾನ್ಯಗಳನ್ನು ಸ್ವಚ್ಛಗೊಳಿಸದೆಯೇ ಊಟ ಸಿದ್ದಪಡಿಸುತ್ತಾರೆ. ಆಹಾರ ಪದಾರ್ಥದಲ್ಲಿ ನುಸಿಗಳು ಗೂಡು ಕಟ್ಟಿಕೊಂಡಿದ್ದರೂ ಸಹಾಯಕಿಯರು ಲೆಕ್ಕಿಸುತ್ತಿರಲಿಲ್ಲ ಎನ್ನಲಾಗಿದೆ.
ಊಟದ ಸಮಯದಲ್ಲಿ ಮಕ್ಕಳ ಕಣ್ಣಿಗೆ ಸೊಳ್ಳೆಗಳು ಕಂಡುಬಂದಿದ್ದು, ಈ ವಿಚಾರವನ್ನು ಮಕ್ಕಳು ತಮ್ಮ ಪಾಲಕರಿಗೆ ತಿಳಿಸಿದ್ದಾರೆ. ಅಡುಗೆ ಸಹಾಯಕಿಯರ ಬೇಜವಾಬ್ದಾರಿತನಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇರುವ ಹಾಗೂ ಸೊಳ್ಳೆಗಳು ತುಂಬಿರುವ ಅಕ್ಕಿ
ಶಾಲಾ ಆಡಳಿತ ವರ್ಗ ಹಾಗೂ ಶಿಕ್ಷಕರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳಿಗೆ ನೀಡಬೇಕಾದ ಆಹಾರ ಕಳಪೆಯಿಂದ ಕೂಡಿದೆ. ಮಕ್ಕಳ ಆರೋಗ್ಯದಲ್ಲಿ ಏರು-ಪೇರಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.