ಗದಗ : ಅದು ಗಂಡ ಹೆಂಡತಿ ಜಗಳ, ನಾಲ್ಕು ಬುದ್ದಿ ಮಾತು ಹೇಳಿ ವಾರ್ನಿಂಗ್ ನೀಡಬಹುದಿತ್ತು. ಇಲ್ಲವಾದರೆ ಕಾನೂನು ರೀತಿ ಕ್ರಮ ಕೈಗೊಳಬೇಕಿತ್ತು. ಆದರೆ, ಆ ಆರಕ್ಷಕರು ಮೃಗೀಯವಾಗಿ ವರ್ತನೆ ಮಾಡಿದ್ದಾರೆ. ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಎಫ್ಐಆರ್ ದಾಖಲಾಗದೇ ಮನಸೋ ಇಚ್ಚೆ ಥಳಿಸಿದ್ದಾರೆ. ಪೊಲೀಸರ ಏಟು ತಿಂದ ವ್ಯಕ್ತಿ ಈಗ ಜಿಮ್ಸ್ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾನೆ. ಪೊಲೀಸರ ವರ್ತನೆಗೆ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರ ವಿರುದ್ಧ ಗಂಭೀರ ಆರೋಪ : ನಗರದ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಕಾನ್ಸ್ ಟೇಬಲ್ಗಳ ವಿರುದ್ಧ ಈ ರೀತಿಯ ಗಂಭೀರ ಆರೋಪ ಕೇಳಿ ಬಂದಿದೆ. ಅಂದಹಾಗೇ ಇಬ್ಬರ ಹೆಂಡಿರ ಮುದ್ದಿನ ಗಂಡನಿಗೆ ಪೊಲೀಸರು ಠಾಣೆಗೆ ಕರೆದು ಹಿಗ್ಗಾಮುಗ್ಗಾ ಥಳಿಸಿರೋ ಆರೋಪ ಕೇಳಿಬಂದಿದೆ. ಮಹಿಳಾ ಠಾಣೆಯ ನಾಲ್ಕೈದು ಜನ ಕಾನ್ಸ್ ಟೇಬಲ್ಗಳು ದಾವಲ್ ಸಾಬ್ ಕುಮನೂರ್ ಎಂಬಾತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.
ಪೊಲೀಸರ ಲಾಠಿ, ಬೂಟಿನ ಏಟಿಗೆ ದಾವಲ್ ಸಾಬ್ ಜಿಮ್ಸ್ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾನೆ. ಬೆನ್ನು, ಎದೆ, ಕೈ ಸೇರಿ ದೇಹದ ವಿವಿಧ ಭಾಗದಲ್ಲಿ ಬಾಸುಂಡೆ ಬರುವ ಹಾಗೆ ಹೊಡೆದಿದ್ದು, ತನ್ನ ಬಳಿ ಇದ್ದ ಸುಮಾರು 40 ಸಾವಿರ ಹಣ ಕಸಿದುಕೊಂಡು ಕಳಿಸಿದ್ದಾರೆ ಎಂದು ಪೊಲೀಸರ ಮೇಲೆ ಥಳಿತಕ್ಕೊಳಗಾದ ವ್ಯಕ್ತಿ ಆರೋಪ ಮಾಡಿದ್ದಾನೆ.
ಏನಿದು ಪ್ರಕರಣ ..?:ಅಂದಹಾಗೆ ದಾವಲ್ ಸಾಬ್ ಕುಮನೂರ್ ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದ ನಿವಾಸಿ. ಇಬ್ಬರು ಹೆಂಡತಿಯರಿದ್ದು, ಮೊದಲನೇ ಹೆಂಡತಿ ಬಸಿರಾ ಜೊತೆಗೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ನಿನ್ನೆಯೂ ಸಹ ಆಧಾರ್ ಕಾರ್ಡ್ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಮೊದಲನೇ ಪತ್ನಿ ಬಸಿರಾ ಬಳಿ ಇದ್ದ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಕೆಲ ದಾಖಲೆಗಳನ್ನ ತೆಗೆದುಕೊಳ್ಳಲು ದಾವಲ್ ಸಾಬ್ ತೆರಳಿದ್ದ.