ಗದಗ:ಮದ್ಯ ಮಾರಾಟಕ್ಕೆ ಮತ್ತೆ ಅವಕಾಶ ನೀಡಿದ್ದಕ್ಕೆ ಗದಗಿನ ತೋಂಟದಾರ್ಯ ಮಠದ ಸ್ವಾಮೀಜಿ ಶ್ರೀ ಸಿದ್ದರಾಮ ಶ್ರೀಗಳು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶ್ರೀಗಳು, ಕೊರೊನಾ ಹಿನ್ನೆಲೆ ನಿಲ್ಲಿಸಲಾಗಿದ್ದ ಮದ್ಯ ಮಾರಾಟಕ್ಕೆ ಕೇಂದ್ರ ಸರ್ಕಾರ ಮತ್ತೆ ಅನುಮತಿ ನೀಡಿರುವುದು ಅತ್ಯಂತ ಆಘಾತಕಾರಿಯಾಗಿದೆ. ಮದ್ಯಪಾನದಿಂದಾಗುವ ಅನಾಹುತಗಳು ಅಷ್ಟಿಷ್ಟಲ್ಲ. ಮದ್ಯವ್ಯಸನಿಗಳು ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡಿರುತ್ತಾರೆ. ಅವರು ಯಾರ ಮಾತನ್ನೂ ಕೇಳುವುದಿಲ್ಲ. ಎಲ್ಲಿ ಬೇಕಾದಲ್ಲಿ ಬಿದ್ದು, ಹೊರಳಾಡಿ ಬಂದು ಮನೆಮಂದಿಗೆಲ್ಲಾ ಕೊರೊನಾ ಹಬ್ಬಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುವರು. ಮದ್ಯ ವ್ಯಸನಿಗಳಿಂದಾಗಿ ಮೊದಲು ಬೀದಿ ಪಾಲಾಗುತ್ತಿದ್ದ ಕುಟುಂಬಗಳು ಇನ್ನು ಮಸಣದ ಪಾಲಾಗುವ ದಿನಗಳು ದೂರವಿಲ್ಲ ಎಂದಿದ್ದಾರೆ.
ಕೊರೊನಾದಿಂದಾಗಿ ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ. ಇದ್ದುದರಲ್ಲಿಯೇ ಸಂಸಾರ ನಿರ್ವಹಣೆ ಮಾಡಬೇಕಾದ ಸಂಕಷ್ಟ ಸ್ಥಿತಿ ಮನೆಯ ಹೆಣ್ಣು ಮಕ್ಕಳಿಗಿರುವಾಗ ಹೊಡೆದು ಬಡೆದು ಇದ್ದುದನ್ನೂ ಕಸಿದುಕೊಂಡು ಹೋದರೆ ಅವರ ಪರಿಸ್ಥಿತಿ ಏನು ಎನ್ನುವುದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಗಾಂಧಿನಾಡಿನವರೇ ಆದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ ಷಾ ಅವರಿಂದ ಇಂಥ ಕ್ರಮವನ್ನು ಭಾರತದ ಸಭ್ಯ - ಸುಸಂಸ್ಕೃತ ಸಮಾಜ ನಿರೀಕ್ಷಿಸಿರಲಿಲ್ಲ. ಅವರ ಈ ನಡೆ ದೇಶದ ಬಗ್ಗೆ ಅವರಿಗಿರುವ ಕಾಳಜಿಯನ್ನು ಪ್ರಶ್ನಿಸುವಂತಿದೆ ಎಂದು ಶ್ರೀಗಳು ಬೇಸರ ವ್ಯಕ್ತಪಡಿಸಿದರು.