ಗದಗ:ಇಷ್ಟು ದಿನ ಕೊರೊನಾ ಭಯ ಇಲ್ಲದೆ ನೆಮ್ಮದಿಯ ಜೀವನ ನಡೆಸುತ್ತಿದ್ದ ಪುಟ್ಟ ಹಳ್ಳಿ ಜನರಲ್ಲಿ ಇದೀಗ ನಿಗೂಢ ಕಾಯಿಲೆ ಲಗ್ಗೆ ಹಾಕಿದ್ದು, ಇದರಿಂದ ಇಡೀ ಊರಿಗೆ ಊರೇ ಈ ಸಮಸ್ಯೆಯಿಂದ ಬಳಲುತ್ತಿದೆ.
ನಿಗೂಢ ಕಾಯಿಲೆಯಿಂದ ಬಳಲುತ್ತಿದೆ ಅರಹುಣಸಿ ಗ್ರಾಮ ಓದಿ: ಯುವಕರ ಹಳೆ ದ್ವೇಷ ಹತ್ಯೆಯಲ್ಲಿ ಅಂತ್ಯ.. ಗ್ರಾಮಗಳ ಮಧ್ಯೆ ಮಾರಾಮಾರಿ
ಗದಗ ಜಿಲ್ಲೆ ರೋಣ ತಾಲೂಕಿನ ಅರಹುಣಸಿ ಗ್ರಾಮದಲ್ಲಿ, ಕಳೆದ ಸುಮಾರು 15 ದಿನಗಳಿಂದ ನಿಗೂಢವಾದ ಕಾಯಿಲೆ ಇಲ್ಲಿನ ಜನರನ್ನ ನಿದ್ದೆಗೆಡಿಸಿದೆ. ಸುಮಾರು 200ಕ್ಕೂ ಹೆಚ್ಚು ಜನರು ವಿವಿಧ ಕಾಯಿಲೆಯಿಂದ ಬಳಲುತ್ತಿದ್ದು, ಒಂದೊಂದು ಮನೆಯಲ್ಲಿ ಇಬ್ಬರು ಮೂವರು ಹಾಸಿಗೆ ಹಿಡಿದಿದ್ದಾರೆ.
ಕೈಕಾಲು ಬೇನೆ, ತಲೆ ಸುತ್ತು, ಪ್ರಜ್ಞಾಹೀನತೆ, ಕಣ್ಣು ಉರಿ, ಜ್ವರ,ನೆಗಡಿ, ಹೊಟ್ಟೆಯಲ್ಲಿ ಸಂಕಟವಾಗುವುದು ಹೀಗೆ ಅನೇಕ ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಕಾಯಿಲೆ ಉಲ್ಬಣಗೊಂಡಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇದರಿಂದ ಕೆಲವರು ಊರು ಬಿಟ್ಟು ಜಮೀನಿನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕಾಯಿಲೆಗೆ ನಿಖರ ಕಾರಣ ಏನು ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ. ಮುಖ್ಯವಾಗಿ ಗ್ರಾಮ ನೈರ್ಮಲ್ಯದ ಬಗ್ಗೆ ಹೆಚ್ಚು ಒತ್ತು ನೀಡಿಲ್ಲ ಅನ್ನೋ ಮಾತು ಗಂಭೀರವಾಗಿ ಕೇಳಿ ಬರುತ್ತಿದೆ. ಎಲ್ಲೆಂದರಲ್ಲಿ ಕೊಳಚೆ ಇರುವುದರಿಂದ ರೋಗ ಹರಡಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ. ಜೊತೆಗೆ ಶುದ್ಧ ಕುಡಿಯುವ ನೀರಿನ ಘಟಕಗಳು ಇದ್ದರೂ, ಅಲ್ಲಿ ಸಹ ಸ್ವಚ್ಛತೆ ಕಾಪಾಡಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿ ಜನರ ರಕ್ತ ತಪಾಸಣೆಗೆ ಮುಂದಾಗಿದ್ದಾರೆ. ಆದರೆ ಪಿಡಿಓ ಮಾತ್ರ ನಾವು ಎಲ್ಲವನ್ನೂ ಸ್ವಚ್ಛವಾಗಿಯೇ ಇಟ್ಟಿದ್ದೇವೆ ಎನ್ನುತ್ತಿದ್ದಾರೆ.
ಈಗಾಗಲೇ ಹಕ್ಕಿ ಜ್ವರ ಎಲ್ಲೆಡೆ ಹರಡುತ್ತಿದ್ದು, ಅದಕ್ಕೂ ಸಹ ಜನರು ಭಯಭೀತರಾಗಿದ್ದಾರೆ. ಕಾಯಿಲೆ ಹರಡಿ ಸುಮಾರು 15 ದಿನವಾದರೂ ಯಾರೂ ಈ ಬಗ್ಗೆ ಎಚ್ಷೆತ್ತುಕೊಂಡಿರಲಿಲ್ಲ. ಈಗ ಆಸ್ಪತ್ರೆ ತುಂಬ ಈ ಊರಿನ ಜನರೇ ಕಾಣಿಸಿಕೊಂಡ ಬಳಿಕ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.