ಗದಗ: ನಗರದಲ್ಲಿ ರಂಗ ಪಂಚಮಿ ದಿನದಂದು ರಂಗುರಂಗಿನ ಹೋಳಿ ಹಬ್ಬದ ಆಚರಣೆಗೂ ಕೊರೊನಾ ವೈರಸ್ ಬಿಸಿ ತಟ್ಟಿದೆ.
ಪೌರಾಣಿಕ ಹಿನ್ನೆಲೆಯುಳ್ಳ ರಂಗಪಂಚಮಿ ದಿನದಂದು ಕಾಮದಹನ ಮಾಡಿ ನಂತರ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಆದ್ರೆ ಈ ವರ್ಷ ಕೊರೊನಾ ವೈರಸ್‌ಗೆ ಭಯಭೀತರಾದ ಜನರು ಹೋಳಿ ಹಬ್ಬ ಆಚರಿಸಲು ಹಿಂದೇಟು ಹಾಕಿದ್ದಾರೆ.
ಕೊರೊನಾ ಭೀತಿಯಲ್ಲಿ ಮುದ್ರಣಕಾಶಿ ನಗರದ ತೋಂಟದಾರ್ಯ ಮಠದ ಸ್ಟೇಷನ್ ರಸ್ತೆಯಲ್ಲಿ ಏರ್ಪಡಿಸುವ ಕಾರಂಜಿಯಲ್ಲೂ ಸಹ ಜನರ ಸಂಖ್ಯೆ ತುಂಬಾ ಕಡಿಮೆ ಇತ್ತು. ಬಣ್ಣದ ಕಾರಂಜಿ, ಡಿಜೆ ಸೌಂಡ್ ಹಾಗೂ ಬಗೆ ಬಗೆಯ ಬಣ್ಣ ಎರಚುವ ದೃಶ್ಯ ಮನಮೋಹಕವಾಗಿರುತಿತ್ತು. ಈ ವರ್ಷ ಕಾರಂಜಿಯಲ್ಲಿ ಬಣ್ಣದ ಬದಲು ಕೇವಲ ನೀರು ಸಿಂಪಡಣೆ ಮಾಡಿದ್ರೂ ಯುವ ಸಮೂಹ ಮಾತ್ರ ಬರಲಿಲ್ಲ. ಬಣ್ಣ ಆಡುವುದರಿಂದ ವೈರಸ್ ಬರಬಹುದು ಎಂಬ ಭಯದಿಂದ ಯುವಕರು ಹೋಳಿ ಆಚರಿಸಲು ಹಿಂದೇಟು ಹಾಕಿದಂತಿದೆ.
ಗದಗ-ಬೆಟಗೇರಿ ಅವಳಿ ನಗರದ ಅನೇಕ ಬೀದಿಗಳು ಭಣಗುಡುತ್ತಿವೆ. ಯುವಕ-ಯುವತಿಯರು ಹಾಗೂ ಮಕ್ಕಳು ಸಡಗರ-ಸಂಭ್ರಮದಿಂದ ಆಚರಿಸುವ ಹೋಳಿಗೆ ಈ ಬಾರಿ ಡೆಡ್ಲಿ ಕೊರೊನಾ ವೈರಸ್ ಶಾಕ್ ನೀಡಿದೆ.