ಗದಗ:ಸರಕಾರದ ಹಣ ದುರುಪಯೋಗ ಮತ್ತು ಕರ್ತವ್ಯಲೋಪ ಆರೋಪದಡಿ ಶಿರಹಟ್ಟಿ ಹಾಗೂ ಮುಂಡರಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಯನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಅಧಿಕಾರ ದುರುಪಯೋಗ ಮಾಡಿಕೊಂಡು ಸರ್ಕಾರಿ ಬೊಕ್ಕಸದ 78.55 ಲಕ್ಷ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ. ಅಲ್ಲದೇ ಅಕ್ರಮ ಎಸಗಿರುವುದು ತನಿಖಾ ಸಮಿತಿಯೊಂದರ ವರದಿಯಿಂದಲೂ ದೃಢಪಪಟ್ಟಿದ್ದು ಪಿಡಿಒ ಸಂಜಯ ಚವಡಾಳ ಅವರನ್ನು ಕಾಯ್ದೆಯಡಿ ಅಮಾನತು ಮಾಡಲಾಗಿದೆ ಎಂದು ಜಿ.ಪಂ.ಸಿಇಒ ಸುಶೀಲಾ ಬಿ ಪ್ರಕಟಣೆ ತಿಳಿಸಿದ್ದಾರೆ.
ಪಿಡಿಒ ವಿರುದ್ಧ ನಾನಾ ದೂರುಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಂಜಯ ಚವಡಾಳ ಕಾರ್ಯನಿರ್ವಹಿಸಿದ 9ಕ್ಕೂ ಅಧಿಕ ಗ್ರಾಮ ಪಂಚಾಯತಿಗಳಲ್ಲಿ ದಾಖಲಾತಿ ಪರಿಶೀಲನೆ ನಡೆಸಿದ ಸಮಿತಿಯು ಪರಿಶೀಲನೆ ನಂತರ ಜಿ.ಪಂ. ಸಿಇಒ ಅವರಿಗೆ ವರದಿ ಸಲ್ಲಿಸಿತ್ತು. ವರದಿಯಲ್ಲಿ ಸಂಜಯ ಎನ್. ಚವಡಾಳ ಹಲವು ಅಕ್ರಮ ಎಸಗಿರುವ ಬಗ್ಗೆ ಬಹಿರಂಗವಾಗಿದೆ.
ಪತ್ನಿ ಹೆಸರಲ್ಲಿ ಏಜನ್ಸಿ ಸೃಷ್ಟಿಸಿ, ಖಾತೆಗೆ ಅಕ್ರಮ ಹಣ ವರ್ಗಾವಣೆ, ವೈಯಕ್ತಿಕ ಖರ್ಚಿಗಾಗಿ ಸರ್ಕಾರದ ಲಕ್ಷಾಂತರ ರೂಪಾಯಿ ದುರ್ಬಳಕೆ, ಸರ್ಕಾರಿ ಆದೇಶ ಉಲ್ಲಂಘಿಸಿ ಚೆಕ್ ಮುಖಾಂತರ ಹಣ ಪಾವತಿ, ಗ್ರಾ.ಪಂ.ಗಳಲ್ಲಿನ ನಾನಾ ವಸ್ತುಗಳ ಖರೀದಿಯ ವೋಚರ್ ಮತ್ತು ಬಿಲ್ಲುಗಳನ್ನು ಲೆಕ್ಕ ತನಿಖೆಗೆ ಒಪ್ಪಿಸದೇ ಇರುವುದೂ ಸೇರಿದಂತೆ ಸರ್ಕಾರದ ನಾನಾ ಕಾನೂನುಗಳನ್ನು ಉಲ್ಲಂಘನೆ ಮಾಡಿರುವುದನ್ನು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.
ಸಮಿತಿ ನೀಡಿದ ವರದಿಯ ಅಂಶಗಳು:
1. ಗ್ರಾ.ಪಂ ಕ್ರಿಯಾ ಯೋಜನೆ, ನಗದು ಪುಸ್ತಕ, ಚೆಕ್ ಕೌಂಟರ್, ಬಿಲ್ಲುಗಳು, ವೋಚರ್ಗಳು ಹಾಗೂ ದಾಸ್ತಾನು ವಹಿವಾಟುಗಳನ್ನು ಲೆಕ್ಕ ತನಿಖೆಗೆ ಹಾಜರುಪಡಿಸದೇ ಇರುವ ಕಾರಣ 32.52 ಲಕ್ಷ ರೂ ವಸೂಲಿಗೆ ಮುಖ್ಯ ಲೆಕ್ಕಾಧಿಕಾರಿಗಳ ಸೂಚನೆ.
2. ಸರ್ಕಾರದ ಆದೇಶ ಉಲ್ಲಂಘಿಸಿ 21.12 ಲಕ್ಷ ರೂ.ಗಳ ಚೆಕ್ ವ್ಯವಹಾರ.