ಗದಗ : ಹದಗೆಟ್ಟ ರಸ್ತೆಯಲ್ಲಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕೆಟ್ಟ ಅನುಭವ ಪಡೆದ ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ತಕ್ಷಣವೇ ರಸ್ತೆ ದುರಸ್ತಿಗೆ ಆದೇಶ ಹೊರಡಿಸಿ ಕೆಲಸ ಶುರು ಮಾಡಿಸಿದ್ದಾರೆ.
ನಗರದಿಂದ ಮುಳಗುಂದ ಪಟ್ಟಣಕ್ಕೆ ಹೋಗುವ ರಸ್ತೆ ಸುಮಾರು ವರ್ಷಗಳಿಂದ ದುರಸ್ತಿಯಾಗಿರಲಿಲ್ಲ. ಜಿಲ್ಲಾಸ್ಪತ್ರೆ ಸಿಬ್ಬಂದಿ, ರೋಗಿಗಳು, ಲಕ್ಷ್ಮೇಶ್ವರ, ಮುಳಗುಂದ ಪಟ್ಟಣ ಸೇರಿದಂತೆ ಸುಮಾರು ಹಳ್ಳಿಯ ಜನ ಇದೇ ರಸ್ತೆ ಮೂಲಕ ಪ್ರಯಾಣಿಸಬೇಕು. ಹಲವು ವರ್ಷಗಳಿಂದ ದೊಡ್ಡ ದೊಡ್ಡ ತಗ್ಗು ಗುಂಡಿಗಳಿಂದ ಕೂಡಿರುವ ರಸ್ತೆಯಲ್ಲಿ ಪ್ರಯಾಣ ಮಾಡುವುದು ಬಹಳ ಕಷ್ಟಕರವಾಗಿದೆ. ಇದೇ ರಸ್ತೆಯಲ್ಲಿ ಸಾಕಷ್ಟು ಜನರು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.
ಕನಿಷ್ಟ ಪಕ್ಷ ಗುಂಡಿಗಳನ್ನಾದರೂ ಮುಚ್ಚುವಂತಹ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಅದರಲ್ಲೂ ಈಗ ಮಳೆಯಾಗಿದ್ದರಿಂದ ರಸ್ತೆ ತುಂಬೆಲ್ಲಾ ಕೆಸರು ತುಂಬಿಕೊಂಡು ವಾಹನ ಸವಾರರು ಪರದಾಡುತ್ತಿದ್ದರು.
ಈ ಮಧ್ಯೆ ಮೊನ್ನೆ ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಜಿಲ್ಲಾಸ್ಪತ್ರೆ, ಮುಳಗುಂದಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವತಃ ರಸ್ತೆಯ ಪರಿಸ್ಥಿತಿ ಕಂಡು ತಕ್ಷಣವೇ ಜೊತೆಯಲ್ಲಿದ್ದ ಜಿಲ್ಲಾ ಯೋಜನಾ ನಿರ್ದೇಶಕ ಎನ್.ಎಸ್. ರುದ್ರೇಶ್ ಜೊತೆ ಸಮಾಲೋಚಿಸಿದ್ದಾರೆ. ಸ್ಥಳದಿಂದಲೇ ರಾಜ್ಯ ಹೆದ್ದಾರಿ ಅಧಿಕಾರಿಗಳ ಸಭೆ ಕರೆದು ಯಾವುದೇ ನೆಪ ಹೇಳದೇ ತಕ್ಷಣ ದುರಸ್ತಿಗೆ ಆದೇಶಿಸಿದ್ದರು. ಈಗ ರಾಜ್ಯ ಹೆದ್ದಾರಿ ನಿರ್ವಹಣೆ ಅಧಿಕಾರಿಗಳು ಮೈಚಳಿ ಬಿಟ್ಟು ರಸ್ತೆ ದುರಸ್ತಿಗೆ ಮುಂದಾಗಿರುವುದು ಉತ್ತಮ ರಸ್ತೆಗಳಾಗುವ ಆಶಯ ಹುಟ್ಟುಹಾಕಿದೆ.