ಗದಗ:ನಗರದ ಗಾಂಧಿ ಸರ್ಕಲ್ ಬಳಿ ಇರುವ ಪುಟ್ಟರಾಜ್ ಫೈನಾನ್ಸ್ ಕಂಪನಿಯಿಂದ ಮೋಸ ಹೋದವರು ಕೇವಲ 20 ರಿಂದ 30 ಜನ ಅಲ್ಲ. ಬರೋಬ್ಬರಿ 150 ರಿಂದ 200 ಜನ ಮೋಸ ಹೋಗಿದ್ದಾರೆ. ನಗರದಲ್ಲಿರುವ ಬಹುತೇಕ ವ್ಯಾಪಾರಸ್ಥರಿಗೆ ಈ ಉದ್ಯಮಿ ಕೋಟಿಗಟ್ಟಲೇ ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಫೈನಾನ್ಸ್ ಕಂಪನಿ ಮಾಲೀಕವಿಜಯ ಶಿಂಧೆ ವಿರುದ್ಧ ಈ ಆರೋಪ ಕೇಳಿಬಂದಿದೆ.
ಫೈನಾನ್ಸ್ ಮಾಲೀಕ ಶಿಂಧೆ ಸುಮಾರು 20 ವರ್ಷಗಳಿಂದ ಫೈನಾನ್ಸ್ ನಡೆಸುತ್ತಿದ್ದರು. ಮೊದ ಮೊದಲು ಬಹುತೇಕರಿಗೆ ಸಾಲ ನೀಡಿ ಅವರ ವ್ಯಾಪಾರ ಚೆನ್ನಾಗಿ ಆಗುವಂತೆ ನೋಡಿಕೊಂಡಿದ್ದರು. ಹೋಟೆಲ್, ಖಾನಾವಳಿ, ಚೈನೀಸ್ ಕಾರ್ನರ್, ಪಾನಿ ಪುರಿ, ಜೊತೆಗೆ ಗೋಲ್ಡ್ ಶಾಪ್, ದೊಡ್ಡ ಹೋಲ್ ಸೇಲ್ ಮತ್ತು ರಿಟೇಲ್ ಕಿರಾಣಿ ಶಾಪ್ ಓನರ್ ಬಳಿ ಫೈನಾನ್ಸ್ ವ್ಯವಹಾರ ಬೆಳೆಸಿದ್ದರು. ಆರ್.ಡಿ, ಫಿಗ್ಮಿ, ಡೆಪೋಸಿಟ್, ಕಡಿಮೆ ದರದಲ್ಲಿ ಬಂಗಾರ ಮಾರಾಟ ಮತ್ತು ಬಂಗಾರದ ತೂಕದಷ್ಟು ಹಣ ಡೆಪೋಸಿಟ್, ಸೈಟ್ ಮಾರಾಟದ ವ್ಯವಹಾರ, ಮನೆ ಖರೀದಿ ವ್ಯವಹಾರ, ಹೀಗೆ ನಾನಾ ರೀತಿಯಲ್ಲಿ ಕೋಟಿ ಕೋಟಿ ರೂ. ವ್ಯವಹಾರ ಮಾಡಿದ್ದರು ಎನ್ನಲಾಗ್ತಿದೆ.
ಕೋಟಿಗಟ್ಟಲೇ ಹಣ ಇಟ್ಟಿದ್ದ ಖಾನಾವಳಿ ಮಾಲೀಕ: ಗದಗ ನಗರ ಅಷ್ಟೇ ಅಲ್ಲದೇ, ಬಳ್ಳಾರಿ, ಹುಬ್ಬಳ್ಳಿ, ಹಾವೇರಿ, ಬಾಗಲಕೋಟೆ, ಮಹಾರಾಷ್ಟ್ರದ ಸಾಂಗಲಿ ಸೇರಿದಂತೆ ಹಲವು ಕಡೆ ಸಹ ಫೈನಾನ್ಸ್ ವ್ಯವಹಾರ ಮಾಡಿದ್ದರು. ಒಬ್ಬೊಬ್ಬ ವ್ಯಾಪಾರಸ್ಥರು ಸುಮಾರು ಕೋಟಿಗಟ್ಟಲೆ ಹಣ ಪಿಗ್ಮಿ ತುಂಬಿದ್ದರು. ಒಂದು ಮೂಲಗಳ ಪ್ರಕಾರ, ನಗರದ ಪ್ರತಿಷ್ಠಿತ ಲಿಂಗಾಯತ ಖಾನಾವಳಿ ಮಾಲೀಕ ಸುಮಾರು 3 ಕೋಟಿ ರೂ. ಪಿಗ್ಮಿ ತುಂಬಿದ್ದರು ಅಂತ ಮೂಲಗಳು ಹೇಳ್ತಿವೆ. ಹೀಗೆ ನಗರದ ಗೋಲ್ಡ್ ಶಾಪ್ನಲ್ಲಿಯೂ ಸಹ ಕೋಟಿಗಟ್ಟಲೇ ವ್ಯವಹಾರ ಮಾಡ್ತಿದ್ದರು ಎನ್ನಲಾಗ್ತಿದೆ.