ಗದಗ:ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಮಾಡಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಳಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದುಷ್ಕರ್ಮಿಗಳ ಅಟ್ಟಹಾಸ: ಹುಲುಸಾಗಿ ಬೆಳೆದಿದ್ದ ಈರುಳ್ಳಿ, ಮೆಣಸಿನಕಾಯಿ ಬೆಳೆ ನಾಶ
ಟ್ರ್ಯಾಕ್ಟರ್ ಹರಿಸಿ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ನಾಶ ಮಾಡಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಘಟನೆಗೆ ವೈಯಕ್ತಿಕ ದ್ವೇಷವೇ ಕಾರಣವೆಂದು ಶಂಕಿಸಲಾಗಿದೆ.
ಬಸವರಾಜ್ ಅಂಗಡಿ ಎಂಬ ರೈತನಿಗೆ ಸೇರಿದ 5 ಎಕರೆ ಜಮೀನಿನಲ್ಲಿ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ನಾಶ ಮಾಡಿದ್ದಾರೆ. ಬೆಳಗ್ಗೆ ಬಂದು ಜಮೀನು ನೋಡಿದ ರೈತನಿಗೆ ದಿಕ್ಕು ತೋಚದಂತಾಗಿದೆ. ಈ ಬಾರಿ ಮೆಣಸಿನಕಾಯಿ ಮತ್ತು ಈರುಳ್ಳಿ ಭರ್ಜರಿ ಫಸಲು ಬಂದಿತ್ತು. ಲಕ್ಷಾಂತರ ರೂ. ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದ. ಆದರೆ ಯಾರೋ ದುಷ್ಕರ್ಮಿಗಳು ವೈಯಕ್ತಿಕ ದ್ವೇಷದಿಂದ ಈ ಕೃತ್ಯ ಎಸಗಿದ್ದಾರೆ ಎನ್ನಲಾಗ್ತಿದೆ.
ವೈಯಕ್ತಿಕ ದ್ವೇಷ ಇದ್ದರೆ ನನ್ನ ಮೇಲೆ ಸೇಡು ತೀರಿಸಿಕೊಳ್ಳಲಿ. ಬೆಳೆ ನಾಶ ಮಾಡಿದ್ರೆ ನಿಮಗೇನು ಸಿಗುತ್ತೆ ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಅಲ್ಲದೇ ಕೃತ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾನೆ.