ಸ್ವಗ್ರಾಮ ಬಿಂಕದಕಟ್ಟಿಗೆ ಮೃತದೇಹ ರವಾನೆ ಗದಗ: ಸ್ಯಾಂಡಲ್ವುಡ್ ನಟ ಯಶ್ ಅವರ ಮೂವರು ಅಭಿಮಾನಿಗಳು ಮೃತಪಟ್ಟ ಕಹಿ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೋರ್ವ ಫ್ಯಾನ್ ಕೊನೆಯುಸಿರೆಳೆದಿದ್ದಾನೆ. ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟಿದ್ದಾನೆ. ನಿಖಿಲ್ ಕರೂರ್ ಮೃತ ಯುವಕ. ಈತನಿಗೆ ಕೇವಲ 22 ವರ್ಷ ವಯಸ್ಸಾಗಿತ್ತು. ಕಿರಿವಯಸ್ಸಿನಲ್ಲೇ ಜೀವ ಹೋಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನಿನ್ನೆ ಯಶ್ ಬರ್ತ್ಡೇ ಹಿನ್ನೆಲೆ ಸಂಭ್ರಮಾಚರಣೆಗೆ ಕಟೌಟ್ ಕಟ್ಟುವಾಗ, ವಿದ್ಯುತ್ ಪ್ರವಹಿಸಿ ಮೂವರು ಯುವಕರು ಸಾವನ್ನಪ್ಪಿದ್ದರು. ಅಭಿಮಾನಿಗಳು ಮೃತಪಟ್ಟ ಹಿನ್ನೆಲೆ ನಿನ್ನೆ ಸಂಜೆ ಯಶ್ ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಜಿಲ್ಲೆಗೆ ಯಶ್ ಆಗಮಿಸಿದ ಹಿನ್ನೆಲೆ ನಟನ ಮತ್ತೋರ್ವ ಅಭಿಮಾನಿ ನಿಖಿಲ್ ಕರೂರ್ ಎಂಬುವಾತ ತಮ್ಮ ಮೆಚ್ಚಿನ ನಟನನ್ನು ನೋಡಲು ದೌಡಾಯಿಸಿದ್ದ.
ಈ ಯುವಕನ ಸ್ಕೂಟಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿದ್ದನು. ತೀವ್ರ ಗಾಯಗೊಳಗಾದ ಯುವಕನಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮೊದಲು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ನಂತರ ಗದಗ ನಗರದ ಖಾಸಗಿ ಆಸ್ಪತ್ರೆಗೆ ಯುವಕನನ್ನು ಶಿಫ್ಟ್ ಮಾಡಲಾಯ್ತು. ಬಿಂಕದಕಟ್ಟಿ ಗ್ರಾಮದ ನಿಖಿಲ್ (22) ಅನ್ನು ನಗರದ ಚಿರಾಯು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ಗದಗದ ತೇಜಾ ನಗರದ ಬಳಿ ಸೋಮವಾರ ಸಂಜೆ ಈ ಅಪಘಾತ ಸಂಭವಿಸಿತ್ತು. ಪೊಲೀಸ್ ವಾಹನಕ್ಕೆ ಯುವಕ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯ ಸ್ಪೇರ್ ಪಾರ್ಟ್ಸ್ ಪುಡಿಪುಡಿಯಾಗಿದೆ. ರಸ್ತೆ ಕ್ರಾಸ್ ಮಾಡುವ ವೇಳೆ ಈ ಘಟನೆ ನಡೆದಿತ್ತು.
ಇದನ್ನೂ ಓದಿ:ಗದಗ; ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿ; ಯುವಕನಿಗೆ ಗಂಭೀರ ಗಾಯ
ಮೃತ ನಿಖಿಲ್ ಲಕ್ಷ್ಮೇಶ್ವರ ತಾಲೂಕಿನ ಅಗಡಿ ಇಂಜಿನಿಯರಿಂಗ್ ಕಾಲೇಜಿನ ಫೈನಲ್ ಇಯರ್ನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದ. ನಿನ್ನೆ ಯಶ್ ಅವರನ್ನು ನೋಡಲು ಸೂರಣಗಿ ಗ್ರಾಮಕ್ಕೂ ತೆರಳಿದ್ದ ಎನ್ನಲಾಗಿದೆ. ಆದರೆ ಅಲ್ಲೂ ಯಶ್ ನೋಡಲು ಆಗಿಲ್ಲ ಎಂದು ಕುಟುಂಬ ಮೂಲಗಳು ತಿಳಿಸಿವೆ. ಮುಳಗುಂದ ರಸ್ತೆಯ ಕ್ರಾಸ್‌ನಲ್ಲಿ ಪೊಲೀಸ್ ವಾಹನಕ್ಕೆ ಈತನ ಸ್ಕೂಟಿ ಡಿಕ್ಕಿ ಹೊಡೆದಿತ್ತು. ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿತ್ತು. ತಕ್ಷಣ ಪೊಲೀಸರೇ ತಮ್ಮ ವಾಹನದಲ್ಲಿ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಧ್ಯರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ 8ಗಂಟೆಗೆ ಮೃತಪಟ್ಟಿದ್ದಾನೆ. ಈ ಕುರಿತು ಗದಗ ಎಸ್ಪಿ ಬಿ.ಎಸ್ ನೇಮಗೌಡ ಅವರು ಗಾಯಾಳು ನಿಖಿಲ್ ಮೃತಪಟ್ಟಿರುವುದಾಗಿ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಅದು ಯಶ್ ಅವರ ಬೆಂಗಾವಲು ವಾಹನ ಅಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. ಗದಗ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮೃತ ಯುವಕನ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಸ್ವಗ್ರಾಮ ಬಿಂಕದಕಟ್ಟಿಗೆ ಮೃತದೇಹ ರವಾನೆ ಮಾಡಲಾಗಿದೆ.
ಇದನ್ನೂ ಓದಿ:ಬರ್ತ್ ಡೇ ಅಂದ್ರೆನೇ ಭಯ ಆಗ್ತಿದೆ, ಮೃತರ ಕುಟುಂಬಗಳಿಗೆ ಅಗತ್ಯ ಸಹಾಯ ಮಾಡುವೆ: ಯುವಕರ ಪೋಷಕರಿಗೆ ಯಶ್ ಸಾಂತ್ವನ