ಗದಗ:ಮೂಡಿಗೆರೆ ಮಾಜಿ ಶಾಸಕ ಎಂ ಪಿ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ರಾಮಣ್ಣ ಲಮಾಣಿ ಸೇರಿದಂತೆ ವಿವಿಧ ಮಾಜಿ ಶಾಸಕರು ಅಕ್ಟೋಬರ್ 10 ರಂದು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತೇವೆ ಎಂದು ಮಾಜಿ ಶಾಸಕ ರಾಮಣ್ಣ ಲಮಾಣಿ ಹೇಳಿದರು. ಅವರು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಕುಂದ್ರಳ್ಳಿ ಗ್ರಾಮದ ಮನೆಯಲ್ಲಿ ಮಾಧ್ಯಮದವರ ಮುಂದೆ ಮಾತನಾಡಿದರು.
ಬಿಜೆಪಿಯಲ್ಲಿ ಎರಡು ಬಾರಿ ಶಾಸಕನಾಗಿ ಶಿರಹಟ್ಟಿ ಮುಂಡರಗಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮೂರನೇ ಬಾರಿಗೆ ಕೊನೆಯ ಹಂತದವರೆಗೂ ಎಲ್ಲಾ ಕಡೆ ಕಾರ್ಯಕ್ರಮಕ್ಕೆ ಖರ್ಚುವೆಚ್ಚಗಳನ್ನು ಮಾಡಿದ್ದೆ. ಆದರೆ ಕೊನೆಯ ಹಂತದಲ್ಲಿ ಬಿಜೆಪಿಯಿಂದ ನನಗೆ ಟಿಕೆಟ್ ಕೊಡಲಿಲ್ಲ. ಆದರೂ ನಿಷ್ಠಾವಂತನಾಗಿ ಬಿಜೆಪಿಯಲ್ಲಿ ದುಡಿದಿದ್ದೇನೆ. ಆದರೆ ಈಗಿನ ಶಾಸಕ ಡಾ. ಚಂದ್ರು ಲಮಾಣಿ ಅವರು ಬಿಜೆಪಿ ಕಾರ್ಯಕರ್ತರನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.