ಗದಗ: ಕಟುಂಬದ ಎಲ್ಲಾ ಸದಸ್ಯರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಎಲ್ಲರನ್ನೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನೋಡಿಕೊಳ್ಳುವವರಿಲ್ಲದೆ ಅನಾಥವಾಗಿದ್ದ ಜಾನುವಾರುಗಳ ಜವಾಬ್ದಾರಿಯನ್ನು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಾಡಳಿತ ಹೊತ್ತುಕೊಂಡಿದೆ.
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಪುಟಗಾಂವ್ ಬಡ್ನಿ ಗ್ರಾಮದ ಒಂದೇ ಕುಟುಂಬದ ಎಂಟು ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು, ಹಾಗಾಗಿ ಅವರನ್ನು ಗದಗ ಜಿಮ್ಸ್ ಮತ್ತು ಲಕ್ಷ್ಮೇಶ್ವರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಕುಟುಂಬದ ಸದಸ್ಯರೆಲ್ಲಾ ಆಸ್ಪತ್ರೆ ಸೇರಿದ ಹಿನ್ನೆಲೆ ಮನೆಯಲ್ಲಿ ಜಾನುವಾರುಗಳು ಅನಾಥವಾಗಿದ್ದವು.
ಜಾನುವಾರುಗಳ ರಕ್ಷಣೆಗೆ ನಿಂತ ಲಕ್ಷ್ಮೇಶ್ವರ ತಾಲೂಕಾಡಳಿತ ಸಿಬ್ಬಂದಿ ಹೀಗಾಗಿ ಅವುಗಳ ಜವಾಬ್ದಾರಿ ತಾಲೂಕ ಆಡಳಿತ ನಿರ್ವಹಿಸುತ್ತಿದೆ. ಕಳೆದ ಮೂರು ದಿನಗಳಿಂದ ಬಡ್ನಿ ಗ್ರಾಪಂ ಮೂರು ಸಿಬ್ಬಂದಿ ಮತ್ತು ಕಂದಾಯ ಇಲಾಖೆಯ ಓರ್ವ ಸಿಬ್ಬಂದಿ ಎತ್ತು ಎಮ್ಮೆಗಳ ರಕ್ಷಣೆ ಮಾಡುತ್ತಿದ್ದಾರೆ.
ಸಗಣಿ ಬಳಿದು, ಮೇವು ಹಾಕಿ ನೀರು ಕುಡಿಸುವ ಸಿಬ್ಬಂದಿ, ಮೂರ್ನಾಲ್ಕು ಹೊತ್ತು ದನಕರುಗಳ ಸೇವೆ ಮಾಡುತ್ತಿದ್ದಾರೆ. ಈ ಕುರಿತು ಮೊದಲೇ ಕೊರೊನಾ ಸೋಂಕಿತ ಕುಟುಂಬಸ್ಥರು ಜಾನುವಾರಗಳ ರಕ್ಷಣೆ ಮಾಡಿದರೆ ತಾವು ಆಸ್ಪತ್ರೆಗೆ ಬರುವುದಾಗಿ ಮನವಿ ಮಾಡಿಕೊಂಡಿದ್ದರಂತೆ ಹಾಗಾಗಿ ಅನಿವಾರ್ಯವಾಗಿ ಸಿಬ್ಬಂದಿ ಈ ಕೆಲಸ ಮಾಡಬೇಕಾಗಿದೆ.