ಗದಗ: ರಾಜ್ಯದಲ್ಲಿ ಹಲವು ದಿನಗಳಿಂದ ಡ್ರಗ್ಸ್ ಮಾಫಿಯಾ ಕುರಿತು ಚರ್ಚೆ ಆರಂಭವಾಗಿದ್ದು, ಇದೇ ವಿಚಾರವಾಗಿ ಶಾಸಕ ಹೆಚ್.ಕೆ.ಪಾಟೀಲ್ ಮಾತನಾಡಿದ್ದಾರೆ. ರಾಜಕಾರಣಿಗಳು, ಅಧಿಕಾರಿಗಳು ಸಹ ಪ್ರಕರಣದ ಹಿಂದೆ ಅಡಗಿದ್ದಾರೆ ಎಂದು ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಡ್ರಗ್ಸ್ ಕೇವಲ ಸಿನಿಮಾದವರಿಗೆ ಮಾತ್ರ ಸೀಮಿತವಲ್ಲ. ಇದರ ಹಿಂದೆ ರೌಡಿಗಳು, ಅಧಿಕಾರಿಗಳು, ರಾಜಕಾರಣಿಗಳೂ ಇದ್ದಾರೆ. ಇದರ ಹಿಂದೆ ಸರ್ಕಾರಿ ವ್ಯವಸ್ಥೆಯೂ ಕೈಜೋಡಿಸುತ್ತಿದೆ. ಈ ಚೈನ್ ಸಿಸ್ಟಮ್‌ಗೆ ಕಡಿವಾಣ ಹಾಕಲು ರಾಜಕಿಯ ಇಚ್ಛಾಶಕ್ತಿ ಬೇಕು ಎಂದಿದ್ದಾರೆ.
ಡ್ರಗ್ ಮಾಫಿಯಾ ಕುರಿತು ಕಾಂಗ್ರೆಸ್ ನಾಯಕ ಹೆಚ್.ಕೆ ಪಾಟೀಲ್ ಪ್ರತಿಕ್ರಿಯೆ ಮುಖ್ಯಮಂತ್ರಿ, ಗೃಹ ಸಚಿವರು ಕೈಗೊಳ್ಳುವ ಕ್ರಮ ಗಟ್ಟಿಯಾಗಬೇಕು. ಆರಂಭಗೊಂಡ ತನಿಖೆ ವೇಗವಾಗಿ ಪೂರ್ಣಗೊಳ್ಳಬೇಕು, ಯಾವುದೇ ಕಾರಣಕ್ಕೂ ತನಿಖೆ ಅರ್ಧಕ್ಕೆ ಕೈಬಿಡಬಾರದು ಎಂದು ಆಗ್ರಹಿಸಿದರು. ಡ್ರಗ್ಸ್ ದಂಧೆ ಮಟ್ಟಹಾಕಲು ವಿರೋಧ ಪಕ್ಷ ರಚನಾತ್ಮಕವಾಗಿ ಕೈಜೋಡಿಸಲಿದೆ ಎಂದರು.
ಇನ್ನು ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಲಂಚದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಲಂಚದ ವ್ಯವಹಾರದಲ್ಲಿ ತೊಡಗಿರುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಗದಗ ಕ್ಷೇತ್ರದಲ್ಲಿ ಇಂತಹ ದುರ್ವರ್ತನೆ ಸಹಿಸುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಇದರ ನಿವಾರಣೆಗೆ ಗಂಭೀರವಾಗಿ ಚಿಂತನೆ ನಡೆಸುತ್ತೇವೆ ಎಂದರು.