ಗದಗ:ಇಲ್ಲಿನಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಅಧಿಕಾರ ಸ್ವೀಕರಿಸಿದ ನಂತರ ಒಂದಲ್ಲಾ ಒಂದು ವಿನೂತನ ಕೆಲಸ ಮಾಡುವ ಮೂಲಕ ಜಿಲ್ಲೆಯ ಜನರ ಗಮನ ಸೆಳೆಯುತ್ತಲೇ ಇದ್ದಾರೆ. ಇದೀಗ ಹೊಸ ಸೇವೆಯೊಂದನ್ನು ಗದಗ ಜನರಿಗೆ ಜಾರಿಗೆ ತರುವುದರೊಂದಿಗೆ ಅವರು ಮತ್ತಷ್ಟು ಜನಸಂಪರ್ಕಕ್ಕೆ ಹತ್ತಿರವಾಗಿದ್ದಾರೆ.
ಇತ್ತೀಚಿಗೆ ನಗರದಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುವುದು ಹೆಚ್ಚಾಗಿದ್ದು, ಅಂತಹ ಮನೆಗಳ ಮೇಲೆ ಪೊಲೀಸರು ನಿಗಾವಹಿಸಲು ಅನುಕೂಲವಾಗಲೆಂದು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಇದು ಪೊಲೀಸರ ಹಾಗೂ ಸಾರ್ವಜನಿಕ ಸಂಪರ್ಕ ಕೊಂಡಿಯಾಗಿ ಅತ್ಯಂತ ತ್ವರಿತಗತಿಯಲ್ಲಿ ಕೆಲಸ ಮಾಡಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಅವರು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.
ಪೊಲೀಸರಿಗೆ ಕೀಲಿ ಹಾಕಿದ ಮನೆಗಳ ವಿವರ ದೊರಕುವಂತೆ ಮಾಡಲು ಗದಗ ಜಿಲ್ಲಾ ಪೊಲೀಸ್ ಇಲಾಖೆ ಒಂದು ಹೆಜ್ಜೆ ಮುಂದಿಟ್ಟಿದೆ. ಸಾರ್ವಜನಿಕರು ಮನೆಯಲ್ಲಿದ್ದು ತಮ್ಮ ಮಾಹಿತಿಯನ್ನು ನೀಡಲು 'ಲಾಕ್ಡ್ ಹೌಸ್ ಮಾನೆಟರಿಂಗ್' (Loked House Monitoring System) ಎಂಬ ತಂತ್ರಾಂಶದಲ್ಲಿ ಬೀಗ ಹಾಕಿದ ಮನೆಗಳ ವಿವರವನ್ನು ಹಾಕಬಹುದಾಗಿದೆ. ಇದರಿಂದ ಪೊಲೀಸರಿಗೆ ಬೀಗ ಹಾಕಿದ ಮನೆಗಳ ವಿವರ ಸರಳವಾಗಿ ಸಿಗುತ್ತದೆ. ಹಾಗೂ ಬೀಗ ಹಾಕಿದ ಮನೆಗಳ ಮೇಲೆ ಸಿಬ್ಬಂದಿ ಹಗಲು ರಾತ್ರಿ ನಿಗಾ ವಹಿಸಲು ಸಹ ತುಂಬಾ ಅನುಕೂಲವಾಗುತ್ತದೆ.
ಜನರು ಉಪಯೋಗಿಸಲು ನಮ್ಮ ವಾಟ್ಸಾಪ್ ಸಂಖ್ಯೆ 9480021100 ಕ್ಕೆ ಹೆಲ್ಪ್ (Help) ಎಂಬ ಸಂದೇಶ ಕಳುಹಿಸಬೇಕು. ಅಲ್ಲಿ ಲಾಕ್ಡ್ ಹೌಸ್ ಲಿಂಕ್ ಬರುತ್ತದೆ. ಅದರಲ್ಲಿ ಉಪಯೋಗದಾರರು ಕೀಲಿ ಹಾಕಿದ ಮನೆಗಳ ವಿವರಗಳನ್ನು ಹಾಕಬಹುದು ಎಂದು ಅವರು ಈ ನೂತನ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ಇಲಾಖೆಯ ಈ ವಿನೂತನ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆಯ ಮಾತುಗಳು ಕೇಳಿ ಬರಲಾರಂಭಿಸಿವೆ. ಹಲವಾರು ಜನರು ಇಲಾಖೆಯ ಪ್ರಯತ್ನವನ್ನು ಕೊಂಡಾಡುತ್ತಿದ್ದಾರೆ.
ಈ ಮೊದಲು ಕಳೆದುಹೋದ ಮೊಬೈಲ್ ಗಳನ್ನು ಹುಡುಕಿಕೊಡುವ ತಾಂತ್ರಿಕ ವ್ಯವಸ್ಥೆಯೊಂದನ್ನು ಇತ್ತೀಚಿಗೆ ಜಿಲ್ಲಾ ಪೊಲೀಸರು ಪರಿಚಯ ಮಾಡಿದ್ದರು. ಇದು ಸಾರ್ವಜನಿಕರಿಗೂ ಕೂಡ ತುಂಬಾ ಅನುಕೂಲವಾಗಿತ್ತು. ಬಳಿಕ ವಿವಿಧೆಡೆ ಕಳ್ಳತನವಾಗಿದ್ದ ಸುಮಾರು 295 ಮೊಬೈಲ್ಗಳನ್ನು ಹೊಸ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವಲ್ಲಿಯು ಸಹ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದರು.
ಅಲ್ಲದೇ ಅವುಗಳನ್ನು ಪುನಃ ಆಯಾ ಮೊಬೈಲ್ ಮಾಲೀಕರಿಗೆ ಒಪ್ಪಿಸಿದ್ದರು. ಕಳೆದುಕೊಂಡಿದ್ದ ಮೊಬೈಲ್ಗಳು ಮತ್ತೆ ತಮ್ಮ ಕೈ ಸೇರುತ್ತಿದ್ದಂತೆ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದರು. ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಕೂಡ ಹೇಳಿದರು. ನಗರದ ಪ್ರಮುಖ ಟ್ರಾಫಿಕ್ ಸಿಗ್ನಲ್ ನಲ್ಲಿ ಬಿಸಿಲಿನ ಬೇಗೆಯಲ್ಲಿ ಒದ್ದಾಡುತ್ತಿದ್ದ ವಾಹನ ಸವಾರರಿಗೆ ಹಸಿರು ನರ್ಸರಿ ತಾರ್ಪಾಲಿನ್ ಹಾಕಿ ನೆರಳು ಕಲ್ಪಿಸಿಕೊಡುವ ಹೊಸ ವ್ಯವಸ್ಥೆ ಕೂಡ ಜಿಲ್ಲಾ ಪೊಲೀಸರು ಮಾಡಿದ್ದರು. ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು.
ಇದನ್ನೂ ಓದಿ:ಅಂತಹ ಕಂಪನಿಗಳಿಗೆ ಸಹಕರಿಸಬೇಡಿ.. ಅಮಿತಾಬ್ ಬಚ್ಚನ್ಗೆ ಸಜ್ಜನರ್ ವಿನಂತಿ