ಗದಗ: ಕೊರೊನಾ ರೋಗದಿಂದಾಗಿ ಈಗಾಗಲೇ ಇಡೀ ಪ್ರಪಂಚವೇ ತತ್ತರಿಸಿ ಹೋಗಿದ್ದು, ಸ್ವಲ್ಪ ಚೇತರಿಕೆ ಕಾಣುವ ಹೊತ್ತಿನಲ್ಲೇ, ಬ್ರಿಟನ್ ದೇಶದಲ್ಲಿ ಪ್ರಾರಂಭಗೊಂಡಿರುವ ಕೊರೊನಾ ರೂಪಾಂತರಿ ಜನರನ್ನು ಇನ್ನಷ್ಟು ಭಯ ಭೀತರನ್ನಾಗಿಸಿದೆ. ಇದರ ನಡುವೆ ಕೋವಿಡ್‌ನಿಂದ ಬಳಲಿ ಚಿಕಿತ್ಸೆ ಪಡೆದ ಚಿಕ್ಕ ಮಕ್ಕಳಲ್ಲಿ ಇದೀಗ ಪೋಸ್ಟ್ ಕೋವಿಡ್ ಅನ್ನೋ ಹೊಸ ಲಕ್ಷಣಗಳು ಕಾಣಿಸಿಕೊಂಡಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಕೋವಿಡ್ ಸೋಂಕಿನ ಬಳಿಕ ಮಕ್ಕಳಲ್ಲಿ ಇದೀಗ ಮತ್ತೊಂದು ರೋಗ ಕಾಣಿಸಿಕೊಂಡಿದೆ. ಕೋವಿಡ್ ಚಿಕಿತ್ಸೆಗೆ ಒಳಗಾಗಿದ್ದ ಮಕ್ಕಳಿಗೆ ವ್ಯತಿರಿಕ್ತವಾದ ಕಾಯಿಲೆಗಳು ಕಾಣಿಸಿಕೊಂಡಿದ್ದು, ಮಕ್ಕಳಲ್ಲಿ ಮಲ್ಟಿ ಸಿಸ್ಟಮ್ ಇಂಪ್ಲಾಮೇಟ್ರಿ ಸಿಂಡ್ರೋಮ್ ಎಂಬ ಸೋಂಕು ಪತ್ತೆಯಾಗಿದೆ.
ಗದಗ ಜಿಲ್ಲೆಯಲ್ಲಿ ಸುಮಾರು 15 ಕ್ಕೂ ಹೆಚ್ಚು ಮಕ್ಕಳಲ್ಲಿ ಈ ಸೋಂಕು ಪತ್ತೆಯಾಗಿದ್ದು, ಕೊರೊನಾ ಬಂದು ಹೋಗಿರುವ ಮಕ್ಕಳ ಮೇಲೆ ಈಗ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ಸೋಂಕು ಕಂಡುಬಂದ ಕೆಲ ಮಕ್ಕಳ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪೋಸ್ಟ್ ಕೋವಿಡ್ ರೋಗದ ಬಗ್ಗೆ ಮಾಹಿತಿ ನೀಡುತ್ತಿರುವ ವೈದ್ಯರು ಈ ಕಾಯಿಲೆಯಿಂದ ಮಕ್ಕಳಲ್ಲಿ ವಿಪರೀತ ಜ್ವರ, ಮೈ-ಕೈ ಕೆಂಪಗಾಗುವುದು, ಲೋ-ಬಿಪಿ ಹೀಗೆ ಕೆಲವು ಲಕ್ಷಣಗಳು ಕಂಡು ಬರುತ್ತಿವೆ. ಕೊರೊನಾ ಬಂದು ಹೋಗಿರುವ ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದಿದ್ದು, ಕೊರೊನಾಗೆ ತುತ್ತಾದ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ವಿಷಯ ಪತ್ತೆಯಾಗಿದೆ ಎಂದು ವೈದ್ಯ ಜಯರಾಜ್ ಪಾಟೀಲ್ ತಿಳಿಸಿದ್ದಾರೆ.
ಚಿಕ್ಕ ಮಕ್ಕಳ ತಜ್ಞರಾಗಿರುವ ಡಾ. ಜಯರಾಜ್ ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಇದು ಐದಾರು ತಿಂಗಳ ಹಿಂದೆ ಯುಎಸ್, ಯುಕೆ ದೇಶದಲ್ಲಿ ಕಂಡು ಬಂದಿತ್ತು. ಮುಖ್ಯವಾಗಿ ಮಕ್ಕಳಿಗೆ ಕೋವಿಡ್ ಬಂದು ಹೋದ 6 ವಾರಗಳ ನಂತರ ಈ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಒಂದೊಂದು ಮಕ್ಕಳಲ್ಲಿ ಒಂದೊಂದು ರೀತಿಯಾಗಿ ಈ ರೋಗ ಲಕ್ಷಣ ಕಂಡುಬರುತ್ತಿದ್ದು, ಕೆಲ ಮಕ್ಕಳಿಗೆ ವಿಪರೀತ ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು. ಮುಖ, ಕಣ್ಣು ಕೆಂಪಾಗುವುದು ಹಾಗೂ ಮೈ-ಕೈ ತುರಿಕೆ ಕಾಣಿಸಿಕೊಳ್ಳುತ್ತಿರುವುದು ಬಹು ಮುಖ್ಯ ಅಂಶವಾಗಿದೆ.
ಇದಕ್ಕಾಗಿ ವಿಶೇಷವಾದ ಟೆಸ್ಟ್ ಇಲ್ಲ. ಒಂದು ಲಕ್ಷ ಜನರ ಪೈಕಿ 400 ಜನರಲ್ಲಿ ಕೋವಿಡ್ ಕಾಣಿಸಿಕೊಂಡರೆ ಅದರಲ್ಲಿ ಮೂರು-ನಾಲ್ಕು ಜನ ವಯಸ್ಕರಿಗೂ ಈ ಸಿಂಡ್ರೋಮ್ ಕಾಣಿಸಿಕೊಳ್ಳಬಹುದು ಎಂದಿದ್ದಾರೆ.
ಇನ್ನು ಇದೊಂದು ಗಂಭೀರ ರೋಗವಾಗಿದ್ದು, ಕೋವಿಡ್ ಬಂದು ಹೋದ ಮಕ್ಕಳಲ್ಲಿ ಈ ರೀತಿಯಾದ ಲಕ್ಷಣಗಳು ಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ಇದರಿಂದಾಗಿ ಆದಷ್ಟು ಬೇಗ ಮಕ್ಕಳನ್ನು ಗುಣಪಡಿಸಬಹುದು. ಇದುವರೆಗೂ ಸಹ ಈ ರೋಗದಿಂದಾಗಿ ಮಕ್ಕಳು ಸಾವನ್ನಪ್ಪಿರುವ ಉದಾಹರಣೆ ಇಲ್ಲ ಎಂದು ವೈದ್ಯ ಜಯರಾಜ್ ಪಾಟೀಲ್ ತಿಳಿಸಿದ್ದಾರೆ.