ಗದಗ: ಪತಿ ಇಜಾಜ್ ಶಿರೂರ ಎಂಬಾತನಿಂದ 23 ಬಾರಿ ಚಾಕು ಇರಿತಕ್ಕೊಳಗಾಗಿ ಹಲ್ಲೆಗೊಳಗಾಗಿದ್ದ ಗದಗದ ಅಪೂರ್ವ ಎಂಬ ಯುವತಿಯ ಮನೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬುಧವಾರ ಭೇಟಿ ನೀಡಿದರು. ನಗರದ ಹುಡ್ಕೋ ಕಾಲೋನಿಯ ನಿವಾಸಕ್ಕೆ ಆಗಮಿಸಿದ ಅವರು, ಸಾಂತ್ವನ ಹೇಳಿದರು. ಈ ವೇಳೆ ಯುವತಿ, ಕೊಲೆ ಭಯದ ಆತಂಕ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ.
'ನನ್ನನ್ನು ಮೋಸ ಮಾಡಿ ಮದುವೆಯಾಗಿ ಸಾಕಷ್ಟು ಮಾನಸಿಕ ಹಿಂಸೆ ನೀಡಿದ್ದಾನೆ. ಜೊತೆಗೆ ಮತಾಂತರ ಮಾಡಿಯೂ ಹಿಂಸಿಸಿದ್ದಾನೆ. ನಾನು ಕೊಲೆಯಾಗಿದ್ರೆ ನನ್ನ ಮಗು ಅನಾಥವಾಗುತ್ತಿತ್ತು. ನನ್ನ ಮಗುವಿಗಾಗಿಯಾದ್ರೂ ನಾನು ಬದುಕಬೇಕು. ಅದಕ್ಕೆ ನನ್ನ ಕುಟುಂಬಕ್ಕೆ ರಕ್ಷಣೆ ಬೇಕು' ಎಂದು ಅವರು ವಿನಂತಿಸಿಕೊಂಡಿದ್ದಾರೆ.