ಗದಗ: ರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ಗಿಡ ನೆಟ್ಟಿರುವುದರಿಂದ ವಾಹನ ಸವಾರರು ಪ್ರಾಣಭಯದಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಗಜೇಂದ್ರಗಡ ಪಟ್ಟಣದಲ್ಲಿರುವ ಮುಖ್ಯ ಹೈಟೆಕ್ ರಸ್ತೆ ವಾಹನ ಸವಾರರ ಜೀವಕ್ಕೆ ಕಂಟಕವಾಗಿದೆ. ಇಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿ ರಸ್ತೆ ಮಧ್ಯದಲ್ಲೇ ಗಿಡ ನೆಟ್ಟಿದ್ದಾರೆ. ಈ ಗಿಡಗಳೀಗ ಬೆಳೆದು ನಿಂತಿವೆ. ವೇಗವಾಗಿ ಬಂದ ಸವಾರರು ಗಿಡಗಳಿಗೆ ಡಿಕ್ಕಿ ಹೊಡೆದು ಕೈಕಾಲು ಮುರಿದುಕೊಂಡ ನಿದರ್ಶನಗಳಿವೆ. ಅಷ್ಟೇ ಅಲ್ಲ, ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದೂ ಇದೆ.
ಪಟ್ಟಣ ಪಂಚಾಯತಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಪಟ್ಟಣ ಪಂಚಾಯತಿ ವತಿಯಿಂದ ಸುಮಾರು 15 ಲಕ್ಷ ರೂ. ಗಿಂತ ಹೆಚ್ಚು ಅನುದಾನದಲ್ಲಿ ಗಿಡಗಳನ್ನು ನೆಡಲಾಗಿದೆ. ಆದರೆ ಇವು ರಸ್ತೆಯನ್ನು ಸುಂದರಗೊಳಿಸುವ ಬದಲು ರಸ್ತೆಯ ಮಾರ್ಗಸೂಚಿಗಳನ್ನೇ ಬದಲಿಸಿದೆ. ಜನರಿಗೆ ನೆರಳಾಗುವ ಬದಲು ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ. ರಸ್ತೆಯಲ್ಲಿ ಮುಂದೆ ಬರುವ ವಾಹನಗಳು ಸವಾರರಿಗೆ ಕಾಣಿಸುವುಲ್ಲ. ಇದರ ಪರಿಣಾಮ ದಿನಕ್ಕೆ ಒಂದೆರಡು ಲಘು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ.
ಈ ಕುರಿತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕೂಡಲೇ ಸಂಬಂಧಪಟ್ಟವರು ಗಿಡಗಳನ್ನು ತೆರೆವುಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.