ಕರ್ನಾಟಕ

karnataka

ETV Bharat / state

ಮಹಾಘನಿ ಗಿಡಗಳ ಅರಣ್ಯ ಕೃಷಿ: ಕೋಟಿ ರೂ. ಆದಾಯ ನಿರೀಕ್ಷೆಯಲ್ಲಿ ಮುಂಡರಗಿ ರೈತ..! - ಮಹಾಘನಿ ಗಿಡಗಳ ಅರಣ್ಯ ಕೃಷಿ

ಮುಂಡರಗಿ ಪಟ್ಟಣದ ಪ್ರಗತಿಪರ ರೈತ ಚಂದ್ರಹಾಸ ಉಳ್ಳಾಗಡ್ಡಿ ಕೋಟಿಗಟ್ಟಲೇ ಆದಾಯ ತಂದುಕೊಡುವ ಮಹಾಘನಿ ಗಿಡಗಳನ್ನು ಬೆಳೆಸಿದ್ದಾರೆ. ತಮ್ಮ7 ಎಕರೆ ಜಮೀನಿನಲ್ಲಿ ಸುಮಾರು 1 ಲಕ್ಷ ರೂ. ಖರ್ಚು ಮಾಡಿ ಈ ಗಿಡಗಳನ್ನು ಬೆಳೆಸಿದ್ದಾರೆ.

mahogany plants
ಮಹಾಘನಿ ಗಿಡಗಳ ಅರಣ್ಯ ಕೃಷಿ: ಕೋಟಿ ಆದಾಯ ನಿರೀಕ್ಷೆಯಲ್ಲಿ ಮುಂಡರಗಿ ರೈತ..

By

Published : Jul 26, 2020, 9:59 AM IST

ಗದಗ:ಆತ ಪ್ರಗತಿಪರ ರೈತ. ತನ್ನ ಪೂರ್ಣ ಆಯಸ್ಸನ್ನು ಕೃಷಿಗೆಂದೇ ಇಷ್ಟು ದಿನ ಮೀಸಲಿಟ್ಟಿದ್ದಾರೆ. ಆದರೂ ಹೊಸತನದಿಂದ ಹಿಂದೆ ಸರಿದಿಲ್ಲಾ. ಇವರು ಮಾಡೋ ವಿಭಿನ್ನ ಕೃಷಿಗೆ ಜನ ಆಡಿಕೊಂಡಿದ್ದು, ಅಷ್ಟಿಷ್ಟಲ್ಲ. ಹಾಗಂತ ಜನರಾಡೋ ಮಾತಿಗೆ ತಲೆಕೆಡಿಸಿಕೊಂಡಿಲ್ಲ.

ಮಹಾಘನಿ ಗಿಡಗಳ ಅರಣ್ಯ ಕೃಷಿ: ಕೋಟಿ ಆದಾಯ ನಿರೀಕ್ಷೆಯಲ್ಲಿ ಮುಂಡರಗಿ ರೈತ..

ಹೀಗೆ ಬರಡು ಭೂಮಿಯಲ್ಲಿ ಸೊಂಪಾಗಿ ಬೆಳೆದು ನಿಂತಿರುವ ಬೆಳೆ.. ಮುಗಿಲೆತ್ತರಕ್ಕೆ ಮುಖ ಮಾಡಿ ಹೊಲದಲ್ಲಿಯೂ ಅರಣ್ಯ ನೆನಪಿಸೋ ವಿಶಿಷ್ಟ ಮರಗಳು.. ಮರಗಳ ಬೆಳವಣಿಗೆಯನ್ನ ಕಣ್ತುಂಬಿಕೊಳ್ತಿರೋ ಹಿರಿಯ ರೈತ ದಂಪತಿ.. ಹೌದು, ಈ ಮಿನಿ ಅರಣ್ಯ ಕಂಡು ಬಂದಿದ್ದು ಮುಂಡರಗಿ ಪಟ್ಟಣದಲ್ಲಿ. ಅರಣ್ಯ ಎಂದಾಕ್ಷಣ ಇದೇನು ಯಾವುದೋ ಕಾಡಿನಲ್ಲಿ ಬೆಳೆದಿರುವುದಲ್ಲ. ಬದಲಾಗಿ ರೈತನೇ ತನ್ನ ಹೊಲದಲ್ಲಿ ಈ ರೀತಿಯ ಮರಗಳನ್ನ ಬೆಳೆಸಿರೋದು.

ಪಟ್ಟಣದ ಪ್ರಗತಿಪರ ಹಿರಿಯ ರೈತ ಚಂದ್ರಹಾಸ ಉಳ್ಳಾಗಡ್ಡಿ ಕೋಟಿಗಟ್ಟಲೇ ಆದಾಯ ತಂದುಕೊಡೋ ಮಹಾಘನಿ ಗಿಡಗಳನ್ನು ಬೆಳೆಸಿದ್ದಾರೆ. ತಮ್ಮ 7 ಎಕರೆ ಜಮೀನಿನಲ್ಲಿ ಸುಮಾರು 1 ಲಕ್ಷ ರೂ. ಖರ್ಚು ಮಾಡಿ ಈ ಗಿಡಗಳನ್ನು ನೆಟ್ಟಿದ್ದಾರೆ. ಮುಖ್ಯವಾಗಿ ಈ ಮರಗಳ ದಿನ್ನೆಗಳನ್ನು ಹಡಗು ತಯಾರಿಕೆಗೆ ಬಳಸಲಾಗುತ್ತೆ. ಹೀಗಾಗಿ ಈ ಮಹಾಘನಿ ಮರಗಳಿಗೆ ಬಹಳಷ್ಟು ಬೇಡಿಕೆ ಸಹ ಇದೆ. ಅಲ್ಲದೇ ಕೋಟ್ಯಂತರ ರೂಪಾಯಿ ಆದಾಯ ನೀಡೋ ಈ ಅರಣ್ಯ ಕೃಷಿ ರೈತನನ್ನು ಕೋಟಿಗೊಬ್ಬನನ್ನಾಗಿ ಮಾಡುವುದರಲ್ಲಿ ಎರಡು ಮಾತಿಲ್ಲ.

ಚಂದ್ರಹಾಸ ಈ ಗಿಡಗಳನ್ನ ನೆಟ್ಟಾಗ ಜನರೆಲ್ಲಾ ಹುಚ್ಚ ಎಂದು ಜರಿದಿದ್ದರಂತೆ. ಒಳ್ಳೆಯ ಜಮೀನನ್ನು ಹಾಳು ಮಾಡಿಕೊಳ್ತಿದ್ದಾನೆ ಅಂತಾ ಅವಮಾನಿಸಿದ್ರಂತೆ. ಆದ್ರೆ ಈಗ ಇದೇ ಗಿಡಗಳು ಚಂದ್ರಹಾಸ ಅವರನ್ನ ಎತ್ತರಕ್ಕೆ ತಂದು ನಿಲ್ಲಿಸಿವೆ. ಇನ್ನು 5 ವರ್ಷ ಕಳೆದ್ರೆ ಚಂದ್ರಹಾಸ ಕೋಟ್ಯಾಧೀಶ ಅನ್ನೋ ನಿರೀಕ್ಷೆಯನ್ನು ಇಮ್ಮಡಿಗೊಳಿಸಿವೆ. 5 ವರ್ಷಗಳ ಹಿಂದೆ ಮಹಾರಾಷ್ಟ್ರದ ಕಂಪನಿಯಿಂದ ಖರೀದಿಸಿದ ಸಸಿಗಳು ಇಂದು ಹೆಮ್ಮರವಾಗಿ ಬೆಳೆದು ನಿಂತಿವೆ. ಆಮ್ಲಜನಕ ದೃಷ್ಟಿಯಿಂದ ಈ ಬೆಳೆಗೆ ವಿಶ್ವ ಪರಿಸರ ಸಂಸ್ಥೆಯಿಂದಲೂ 50 ಸಾವಿರ ರೂ.ಸಹಾಯಧನ ನೀಡಲಾಗುತ್ತೆ. ಅಲ್ಲದೇ 3 ವರ್ಷದ ನಂತರ ಪ್ರತಿ ಎಕರೆಗೆ ಕಂಪನಿಯವರು 50 ಸಾವಿರ ರೂಪಾಯಿ ನೀಡುತ್ತಾರೆ.

ಹೀಗೆ ಸತತವಾಗಿ 12 ವರ್ಷ ಮರಗಳ ಕಟಾವಿನ ತನಕ ಪ್ರತಿ ವರ್ಷ ಎಕರೆಗೆ 50 ಸಾವಿರ ರೂ. ನಂತೆ ಅಡ್ವಾನ್ಸ್ ಹಣ ಕೊಡುತ್ತಾ ಹೋಗುತ್ತಾರೆ. ಹೀಗಂತಾ ಕಂಪನಿ ಮೊದಲೇ ಒಡಂಬಡಿಕೆ ಮಾಡಿಕೊಂಡಿರುತ್ತೆ. ಪ್ರತಿ ಎಕರೆಯಲ್ಲಿ 450 ಕ್ಕೂ ಹೆಚ್ಚು ಮರಗಳು ಬೆಳೆದಿದ್ದು, ಒಟ್ಟು 07 ಎಕರೆಯಲ್ಲಿ 03 ಸಾವಿರಕ್ಕೂ ಅಧಿಕ ಮರಗಳು ಸಮೃದ್ಧವಾಗಿ ಬೆಳೆದು ನಿಂತಿವೆ. ಚರಂಡಿ ನೀರನ್ನೇ ತಮ್ಮ ಹೊಲಕ್ಕೆ ಹರಿಬಿಡೋ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಗಿಡದ ಎಲೆಗಳೇ ಇವುಗಳಿಗೆ ಸಂತುಷ್ಠ ಗೊಬ್ಬರ. ಗಿಡಗಳ ಮಧ್ಯೆ ಅಂತರ ಬೆಳೆಯನ್ನೂ ಬೆಳೆದಿದ್ದಾರೆ. ಶೇಂಗಾ, ಜೋಳ, ಮೆಕ್ಕೆಜೋಳ ಸೇರಿದಂತೆ ನಾನಾ ತರಹದ ಬೆಳೆ ಬೆಳೆದು ನಿರಂತರ ಆದಾಯ ಸಹ ಪಡೆಯುತ್ತಿದ್ದಾರೆ.

ಸದ್ಯ ಚಂದ್ರಹಾಸ ಬೆಳೆದಿರೋ ಬೆಳೆಯನ್ನು ನಾನಾ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಂದ ನೋಡುವುದಕ್ಕೆ ಜನರು ಬರುತ್ತಿದ್ದಾರೆ. ಸಾಯುವ ಮುನ್ನ ಕೃಷಿಯಲ್ಲಿಯೇ ಕೋಟಿ ಆದಾಯ ಗಳಿಸಬೇಕು ಎನ್ನುವುದು ಚಂದ್ರಹಾಸ ಅವರ ಕನಸಾಗಿದೆ. ಉಳಿದ ರೈತರಿಗೂ ಮಾದರಿಯಾಗೇಕು ಎಂಬುದು ಇವರ ಆಶಯ. ಸದಾ ಕೃಷಿಯಲ್ಲಿ ಏನಾದ್ರೂ ಒಂದು ಪ್ರಯೋಗ ಮಾಡ್ಬೇಕು ಅನ್ನೋ ಚಂದ್ರಹಾಸ ಅವರು ಉತ್ತರ ಕರ್ನಾಟಕದಲ್ಲಿ ಯಾರೂ ಮಾಡದ ಕೃಷಿ ಸಾಧನೆ ಮಾಡಲು ಹೊರಟಿದ್ದು, ಅವರಿಗೆ ಒಳ್ಳೆಯದಾಗಲಿ.

ABOUT THE AUTHOR

...view details