ಗದಗ : ಶಾಲೆಯ ಮುಖ್ಯೋಪಾಧ್ಯಾಯರೊಬ್ಬರು ಬೋಧನಾ ಮಾರ್ಗಸೂಚಿ ನಿಯಮವನ್ನು ಉಲ್ಲಂಘಿಸಿ ಪ್ರಬಂಧ ಏರ್ಪಡಿಸಿ ಹಿಂದೂ ಪರ ಸಂಘಟನೆಯ ಕೆಂಗಣ್ಣಿಗೆ ಗುರಿಯಾದ ಘಟನೆ ಗದಗದಲ್ಲಿ ನಡೆದಿದೆ.
ತಾಲೂಕಿನ ನಾಗಾವಿ ಗ್ರಾಮದ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಅಬ್ದುಲ್ ಮುನಾಫ್ ಬಿಜಾಪುರ ಅವರು ಶಾಲೆಯಲ್ಲಿ ಮಹಮ್ಮದ್ ಪೈಗಂಬರ್ ಕುರಿತ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿದ್ದಕ್ಕೆ ಶ್ರೀರಾಮಸೇನೆ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆ ಹಿನ್ನೆಲೆ ಶಾಲೆಗೆ ಬಂದು ವಿಚಾರಣೆ ನಡೆಸಿದ ಬಿಇಒ ವಿವಿ ನಡುವಿನಮನಿ ಮುಖ್ಯೋಪಾಧ್ಯಾಯನಿಗೆ ತರಾಟೆ ತೆಗೆದುಕೊಂಡರು. ಜೊತೆಗೆ ಇಲಾಖೆ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸುವಂತೆ ತಿಳಿಸಿದರು.
ಘಟನೆಯ ವಿವರ :ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫ್ ಬಿಜಾಪುರ ಹೇಳುವ ಪ್ರಕಾರ, ಗದಗ ಮೂಲದ ಜುನೇದ್ ಸಾಬ್ ಉಮಚಗಿ ಎಂಬುವರು ಶಾಲೆಗೆ ಆಗಮಿಸಿ ಮಹಮ್ಮದ್ ಪೈಗಂಬರ್ ಕುರಿತು ಪುಸ್ತಕ ವಿತರಿಸಿದರು. ಈ ಪುಸ್ತಕಗಳನ್ನು ಓದಿ ಪೈಗಂಬರ್ ಕುರಿತು ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿ, ಉತ್ತಮ ಪ್ರಬಂಧಕ್ಕೆ ಬಹುಮಾನ ನೀಡುವುದಾಗಿ ಹೇಳಿದ್ದರಂತೆ.