ಗದಗ: ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ತಾಳಿ ಅಡವಿಟ್ಟು ಟಿವಿ ಕೊಡಿಸಿದ ಮಹಾತಾಯಿ ಕುರಿತು ಈಟಿವಿ ಭಾರತದಲ್ಲಿ ವರದಿ ಪ್ರಕಟವಾದ ನಂತರ ಸಹಾಯದ ಮಹಾಪೂರವೇ ಹರಿದು ಬರುತ್ತಿದೆ.
ಗದಗ ಜಿಲ್ಲೆಯ ರಡ್ಡೆರ ನಾಗನೂರ ಗ್ರಾಮದ ಕಸ್ತೂರಿ ಎಂಬ ಮಹಿಳೆ ಬಗ್ಗೆ ಜುಲೈ 30 ರಂದು "ತಾಳಿ ಅಡವಿಟ್ಟು ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಟಿವಿ ಕೊಡಿಸಿದ ಮಹಾತಾಯಿ" ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಬಳಿಕ ಆ ತಾಯಿಗೆ ಸಹಾಯ ಮಾಡಲು ಅನೇಕ ದಾನಿಗಳು ಮುಂದಾಗುತ್ತಿದ್ದಾರೆ. ಇದೀಗ ಮಾಜಿ ಸಚಿವ ಹಾಗೂ ಶಾಸಕ ಜಮೀರ್ ಅಹ್ಮದ್ ಕೂಡ 50 ಸಾವಿರ ರೂ. ಧನಸಹಾಯ ಮಾಡಿದ್ದಾರೆ.
ತಾಳಿ ಅಡವಿಟ್ಟ ತಾಯಿಗೆ ಮಾಜಿ ಸಚಿವ ಜಮೀರ್ ಅಹ್ಮದ್ ಸಹಾಯಹಸ್ತ ಹುಬ್ಬಳ್ಳಿಯಿಂದ ತಮ್ಮ ಆಪ್ತ ಸಹಾಯಕನನ್ನು ರಡ್ಡೆರ ನಾಗನೂರ ಗ್ರಾಮಕ್ಕೆ ಕಳುಹಿಸಿ 50 ಸಾವಿರ ರೂಪಾಯಿ ಹಣ ಕೊಡಿಸಿದ್ದಾರೆ. ಅದರಲ್ಲಿ ಮಾಂಗಲ್ಯ ಬಿಡಿಸಲು 15 ಸಾವಿರ, ಮಕ್ಕಳ ಶಿಕ್ಷಣಕ್ಕೆ 35 ಸಾವಿರ ರೂ. ನೀಡಿದ್ದು, ಮುಂದೆ ಏನಾದರೂ ಸಹಾಯ ಬೇಕಾದ್ರೆ ಸಂಪರ್ಕಿಸುವಂತೆ ಶಾಸಕರು ತಿಳಿಸಿದ್ದಾರಂತೆ.
ಇದನ್ನೂ ಓದಿ:ತಾಳಿ ಅಡವಿಟ್ಟು ಮಕ್ಕಳ ಆನ್ಲೈನ್ ಶಿಕ್ಷಣಕ್ಕೆ ಟಿವಿ ಕೊಡಿಸಿದ ಮಹಾತಾಯಿ
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ 20 ಸಾವಿರ ರೂ. ಚೆಕ್ ನೀಡಿದ್ದಾರೆ. ತಮ್ಮ ಬೆಂಬಲಿಗರನ್ನು ಗ್ರಾಮಕ್ಕೆ ಕಳುಹಿಸಿ ಅವರ ಮೂಲಕ ಚೆಕ್ ಕೊಡಿಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಕಸ್ತೂರಿ ಅವರ ಮನೆಗೆ ಭೇಟಿ ನೀಡಿ, ಮಕ್ಕಳ ರಕ್ಷಣಾ ಘಟಕದ ಪಾಯೋಜಕತ್ವದಡಿ ಮಕ್ಕಳಿಗೆ ಪ್ರತಿ ತಿಂಗಳು 1 ಸಾವಿರ ರೂಪಾಯಿಯಂತೆ 3 ವರ್ಷ ಧನಸಹಾಯ ಮಾಡುವುದಾಗಿ ಹೇಳಿದ್ದಾರೆ. ಹೀಗೆ ಹಲವರು ಈ ಮಹಾತಾಯಿಗೆ ನೆರವಾಗುತ್ತಿದ್ದಾರೆ.