ಗದಗ: ಮಠದ ಹಣವನ್ನೂ ಕಿತ್ತುಕೊಳ್ಳುವ ಮನೋಭಾವ ಸರ್ಕಾರದಲ್ಲಿದ್ದರೆ, ಇವರನ್ನ ದೇವರೇ ಕಾಪಾಡಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಶಾಸಕ ಹೆಚ್. ಕೆ ಪಾಟೀಲ್ ಹೇಳಿದರು. ದಿಂಗಾಲೇಶ್ವರ ಸ್ವಾಮೀಜಿಗಳ 30 ಪರ್ಸೆಂಟೇಜ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಇದೇ ಸಾಕ್ಷಿಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ದಿಂಗಾಲೇಶ್ವರ ಸ್ವಾಮೀಜಿಗಳ 30 ಪರ್ಸೆಂಟೇಜ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್. ಕೆ ಪಾಟೀಲ್ ವಿಧಾನಸಭೆ, ವಿಧಾನ ಪರಿಷತ್ನಲ್ಲಿ ಈ ಹಿಂದೆ ಅವರದೇ ಪಕ್ಷದ ಸದಸ್ಯರು ಆ ಭಾವ ಬರುವ ಹಾಗೆ ಮಾತನಾಡಿದ್ದರು. ಅಲ್ಲದೇ ಗುತ್ತೆಗೆದಾರರ ಸಂಘದಿಂದ ಪ್ರಧಾನ ಮಂತ್ರಿಯವರಿಗೆ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಪತ್ರ ಬರೆದರು. ಇವೆಲ್ಲದರ ನಂತರ ಸ್ವಾಮೀಜಿಗಳೇ ಆ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರೆ, ಎಷ್ಟು ಬಹಿರಂಗ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ ಎಂದರು.
ಬಹಿರಂಗ ಭ್ರಷ್ಟಾಚಾರ ಅವರ ಕಾರ್ಯಕರ್ತನನ್ನೇ ಬಲಿ ಪಡೆದಿದೆ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಚಾರವನ್ನು ಪ್ರಸ್ತಾಪಿಸಿದ ಹೆಚ್. ಕೆ ಪಾಟೀಲ್, ಇನ್ನೂ ಏನಾದ್ರೂ ಸಾಬೀತು ಮಾಡುವುದು ಉಳಿದಿದೆಯೇ? ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ರಾಜೀನಾಮೆ ಕೊಡಬೇಕು. ಕೇವಲ ಈಶ್ವರಪ್ಪ ಒಬ್ಬರ ರಾಜೀನಾಮೆಯಲ್ಲ, ಬಂಧಿಸುವುದಲ್ಲ. ಸರ್ಕಾರವೇ ರಾಜೀನಾಮೆ ಕೊಡಬೇಕೆಂದು ಆಗ್ರಹಿಸುತ್ತೇನೆ. ಇಷ್ಟೆಲ್ಲ ನಡೆದರೂ, ಸರ್ಕಾರ ನಡೆಸುತ್ತಿದ್ದಾರೆ ಎಂದರೆ ಇವರಿಗೆ ನಾಚಿಕೆಯಾಗಬೇಕು. ಬಿಜೆಪಿ ಸರ್ಕಾರ ನೈತಿಕ ಹಕ್ಕನ್ನು ಕಳೆದುಕೊಂಡಿದೆ ಎಂದು ಕಿಡಿಕಾರಿದರು.
ಹುಬ್ಬಳ್ಳಿ ಗಲಭೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನಮ್ಮ ಭಾಗದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಬೇಕು. ಕಳೆದ ಕೆಲ ದಿನಗಳಿಂದ ರಾಜದಲ್ಲಿ ಕ್ಷೋಭೆ ಹುಟ್ಟು ಹಾಕಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅಂತ್ಯ ಹಾಡಬೇಕು. ಭ್ರಾತೃತ್ವ ಭಾವನೆ ಬೆಳೆಸಿ ಶಾಂತಿಯುತ ವಾತಾವರಣ ನಿರ್ಮಿಸಲು ನಮ್ಮನ್ಮ ನಾವು ತೊಡಗಿಸಿಕೊಳ್ಳಬೇಕು ಎಂದು ಜನರಿಗೆ ಹೆಚ್ ಕೆ ಪಾಟೀಲ್ ಕಿವಿಮಾತು ಹೇಳಿದರು.
ಇದನ್ನೂ ಓದಿ:ಐಸ್‌ಕ್ರೀಂ ಕೊಟ್ಟರೆ ಅದು ತಲುಪುವಾಗ ಕಡ್ಡಿಯಷ್ಟೇ ಉಳಿದಿರುತ್ತೆ.. ಅನುದಾನಕ್ಕಾಗಿ ಮಠಗಳೂ 30% ಕಮೀಷನ್ ಕೊಡ್ಬೇಕು : ದಿಂಗಾಲೇಶ್ವರ ಶ್ರೀ