ಗದಗ: ಹವಾಮಾನ ವೈಪರೀತ್ಯ ಕಾರಣ ಅಮರನಾಥ ಯಾತ್ರೆಗೆ ತೆರಳಿದ್ದ 300 ಜನ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ನಿನ್ನೆ ರಾತ್ರಿ ಹವಾಮಾನ ವೈಪರೀತ್ಯ ಹಾಗೂ ಅತಿಯಾದ ಚಳಿಯಿಂದಾಗಿ ಸಮಸ್ಯೆಯಾಗಿತ್ತು. ಅಮರನಾಥ ದೇವಸ್ಥಾನದ ಆಡಳಿತ ಮಂಡಳಿ, ಮಿಲಿಟರಿ ಅಧಿಕಾರಿಗಳು ಎಲ್ಲರಿಗೂ ಅಗತ್ಯ ನೆರವನ್ನು ನೀಡಿದ್ದು, ಅವರನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ ಹೇಳಿದರು.
ಈ ಬಗ್ಗೆ ನಗರದಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಹವಾಮಾನ ವೈಪರೀತ್ಯ ಹಾಗೂ ಗುಡ್ಡ ಕುಸಿತದಿಂದಾಗಿ ಪಂಚತರಣಿ ಬೇಸ್ ಕ್ಯಾಂಪ್ನಲ್ಲಿ ಅವರೆಲ್ಲರೂ ಕಳೆದರಡು ದಿನಗಳಿಂದ ರಕ್ಷಣೆ ಪಡೆಯುತ್ತಿದ್ದಾರೆ. ಅಲ್ಲಿರುವ ಯಾರಿಗೂ ಯಾವುದೇ ತೊಂದರೆ ಇಲ್ಲ. ಹಾಗಾಗಿ ಯಾರೂ ಭಯ ಪಡುವಂತ ಅವಶ್ಯಕತೆ ಇಲ್ಲ. ಯಾತ್ರಾರ್ಥಿಗಳಿಗೆ ಮೆಡಿಕಲ್ ಹಾಗೂ ಹಾಸಿಗೆ ಹೊದಿಕೆ ನೀಡಿ ವಿಶೇಷ ಕಾಳಜಿ ವಹಿಸಲಾಗಿದೆ ಎಂದು ತಿಳಿಸಿದರು.
ಭಾನುವಾರ ಬೆಳಗ್ಗೆ ತೊಂದರೆಯಲ್ಲಿದ್ದ ವಿನೋದ ಅನ್ನುವವರ ಜತೆ ನಾನು ಮಾತನಾಡಿದ್ದೇನೆ. ರಾಜ್ಯ ಸರ್ಕಾರದ ಹಿರಿಯ ಅಧಿಕಾರಿ ರಶ್ಮಿ ಮಹೇಶ ಈ ಪ್ರಕರಣ ನಿರ್ವಹಿಸುತ್ತಿದ್ದಾರೆ. ಇನ್ನೋರ್ವ ಹಿರಿಯ ಅಧಿಕಾರಿ ಸುನೀಲ್ ಕುಮಾರ್ ಶ್ರೀನಗರ ತಲುಪಿದ್ದಾರೆ. ನಾಲ್ಕೈದು ದಿನಗಳಲ್ಲಿ ಅವರೆಲ್ಲರೂ ರಾಜ್ಯಕ್ಕೆ ಸೇಫ್ ಆಗಿ ಮರಳಿ ಬರುತ್ತಾರೆ ಎಂದು ಹೆಚ್.ಕೆ.ಪಾಟೀಲ್ ಭರವಸೆ ನೀಡಿದರು.
ಈಗಾಗಲೇ ಕೆಲ ಅಧಿಕಾರಿಗಳು ದೆಹಲಿ, ಶ್ರೀನಗರ ಸೇರಿ ವಿವಿಧೆಡೆಗೆ ಹೋಗಿದ್ದಾರೆ. ಕರ್ನಾಟಕ ಭವನ ರೆಸಿಡೆನ್ಸಿ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ಪಂಚತರಣಿ ಕ್ಯಾಂಪ್ ನಿಂದ ನೀಲ್ ಗ್ರಥ ಕ್ಯಾಂಪ್ಗೆ ಯಾತ್ರಿಗಳನ್ನು ಕರೆ ತರಲಾಗಿದೆ. ಅಲ್ಲಿಂದ ಶ್ರೀನಗರದ ಮೂಲಕ ಯಾತ್ರಿಕರು ಬೆಂಗಳೂರಿಗೆ ಬರಬಹುದು. ಗದಗ ಜಿಲ್ಲಾಧಿಕಾರಿಗಳು ಯಾತ್ರಿಕರ ಜೊತೆ ಸಂಪರ್ಕದಲ್ಲಿದ್ದಾರೆ ಎಂದರು.
ಅಮರನಾಥ ಯಾತ್ರೆಗೆ ಹೊರಟಿದ್ದ ಕರಾವಳಿಯ 20 ಮಂದಿ ಸುರಕ್ಷಿತ: ಅಮರನಾಥ ಯಾತ್ರೆ ತೆರಳಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 20 ಯಾತ್ರಾರ್ಥಿಗಳು ಸುರಕ್ಷಿತವಾಗಿ ಇದ್ದೇವೆ ಎಂದು ತಂಡದ ನೇತೃತ್ವ ವಹಿಸಿರುವ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಸಂತೋಷ್ ಮಾರುತಿನಗರ ತಿಳಿಸಿದ್ದರು. ಜುಲೈ 4ರಂದು ರೈಲಿನ ಮೂಲಕ ಹೊರಟಿದ್ದು, ಅಮರನಾಥ ಯಾತ್ರೆ ಬಳಿಕ ವೈಷ್ಣೋದೇವಿ ಯಾತ್ರೆ ಮಾಡಲಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಯಿಂದ ನಾವು 20 ಮಂದಿ ಇದ್ದೇವೆ ಎಂದು ಹೇಳಿರುವ ಸಂತೋಷ್, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಿಂದ ಒಟ್ಟು 5 ಯಾತ್ರಾರ್ಥಿಗಳು, ಮಂಗಳೂರು ಅಡ್ಯಾರಿನಿಂದ 8, ಪುತ್ತೂರು, ಉಡುಪಿ, ಮೂಡಬಿದಿರೆಯಿಂದ ತಲಾ ಒಬ್ಬರು, ಸಜೀಪದಿಂದ 3, ಉಪ್ಪಿನಂಗಡಿ ಕರಾಯದಿಂದ ಒಬ್ಬರು ಹೀಗೆ ಒಟ್ಟು 20 ಯಾತ್ರಾರ್ಥಿಗಳು ಯಾತ್ರೆಗೆ ತೆರಳಿದ್ದಾಗಿ ತಿಳಿಸಿದ್ದರು.
ನಾವೆಲ್ಲರೂ ಅಮರನಾಥ ದೇವಲಯಕ್ಕೂ ಹೋಗಲು ಸಾಧ್ಯವಾಗದೆ, ಅತ್ತ ಕೆಳಗೆ ಜಮ್ಮು ಮತ್ತು ಕಾಶ್ಮೀರಕ್ಕೂ ಹೋಗಲು ಸಾಧ್ಯವಾಗದೆ ಸಿಆರ್ಪಿಎಫ್ ಮತ್ತು ಸೇನಾ ಕ್ಯಾಂಪ್ನಲ್ಲಿದ್ದೇವೆ. ಯಾವುದೇ ತೊಂದರೆಯಿಲ್ಲದೆ ಸುರಕ್ಷಿತವಾಗಿದ್ದೇವೆ. ಸದ್ಯಕ್ಕೆ ಎಲ್ಲೂ ಹೋಗಲು ಆಗುತ್ತಿಲ್ಲ. ಆದರೆ ನಮ್ಮ ಸುರಕ್ಷತೆಯ ದೃಷ್ಟಿಯಿಂದ ಸೇನೆಯವರು ಕ್ರಮ ಕೈಗೊಳ್ಳುತ್ತಿದ್ದಾರೆ. ಅತಿಯಾದ ಮಳೆಗೆ ಭೂಕುಸಿತ ಕಂಡು ಬಂದಿದ್ದು, ಯಾತ್ರಾರ್ಥಿಗಳು ಜಾಗರೂಕತೆಯಿಂದ ಇರುವಂತೆ ತಿಳಿಸಿದ್ದಾರೆ. ಹೀಗಾಗಿ ಸದ್ಯ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಮಳೆಯಿಂದ ಅಮರನಾಥ ಮಾರ್ಗ ಮಧ್ಯೆ ಗುಡ್ಡ ಕುಸಿತ: ಸಂಕಷ್ಟಕ್ಕೆ ಸಿಲುಕಿದ ಧಾರವಾಡದ ಐವರು ಗೆಳೆಯರು