ಗದಗ: ನಾನೇ ಮುಖ್ಯಮಂತ್ರಿಯಾದ್ರು ಕಾಲ ಮಿತಿಯಲ್ಲಿ 2ಎ ಮೀಸಲಾತಿ ತರಲು ಸಾಧ್ಯವಿಲ್ಲ. ಆದ್ರೆ ಅದಕ್ಕಾಗಿ ಪ್ರಯತ್ನ ನಡೆದಿದ್ದು, ಸಮುದಾಯದ ಮುಖಂಡರು ಕಾಯಬೇಕು ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ 2ಎ ಮೀಸಲಾತಿ ವಿಚಾರವಾಗಿ ಯಡಿಯೂರಪ್ಪನವರಿಗೆ ಮನಸ್ಸಿರಲಿಲ್ಲ ಎನ್ನುವುದನ್ನು ಒಪ್ಪಲ್ಲ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಈ ಹಿಂದೆ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದೇ ಯಡಿಯೂರಪ್ಪನವರು. ಈಗ ನಾವು 2ಎ ಕೇಳಲು ಸಮರ್ಥರಾಗಿದ್ದೇವೆ. ಒಕ್ಕೂಟ ವ್ಯವಸ್ಥೆಯಲ್ಲಿ ನಾವಿದ್ದೇವೆ. ನಮ್ಮ ಸಮಾಜಕ್ಕೆ ನ್ಯಾಯ ಸಿಗಬೇಕು ಅನ್ನೋದು ನನ್ನ ಬೇಡಿಕೆಯೂ ಆಗಿದೆ. ಅದರ ಜೊತೆಗೆ ಬೇರೆ ಸಮಾಜದವರಿಗೆ ಅನ್ಯಾಯವಾಗಬಾರದು. ಮೀಸಲಾತಿ 50 ಪ್ರತಿಶತದಷ್ಟು ಮೀರಬಾರದು ಅನ್ನೋ ನಿಯಮವಿದೆ. ಸಂವಿಧಾನದ ಚೌಕಟ್ಟಿನಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಲು ಮುಖ್ಯಮಂತ್ರಿ ಬೊಮ್ಮಾಯಿ ಪ್ರಯತ್ನಿಸುತ್ತಿದ್ದಾರೆ ಎಂದು ಸಚಿವರು ಹೆಳಿದ್ರು.
ಮೀಸಲಾತಿಗಾಗಿ ಸರ್ಕಾರಕ್ಕೆ ಗಡುವು ಕೊಟ್ಟಿರುವ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಲ್ಲಾ ಜಿಲ್ಲೆಯಲ್ಲಿ ಪ್ರತಿಜ್ಞೆ ಪಂಚಾಯತ್ ಮಾಡುತ್ತಿದ್ದಾರೆ. ಮೀಸಲಾತಿಗೆ ಪ್ರಯತ್ನ ನಡೆಯುತ್ತಿರುವ ಸಂದರ್ಭದಲ್ಲಿ ಧರಣಿ ನಡೆಸುವುದು ಸರಿಯಲ್ಲ. ಸೋಮವಾರ ಸ್ವಾಮೀಜಿಯನ್ನು ಭೇಟಿಯಾಗಿ ಪ್ರತಿಭಟನೆ ಮಾಡದಂತೆ ಮನವಿ ಮಾಡಿಕೊಳ್ಳುವುದಾಗಿ ಸಚಿವ ಸಿ ಸಿ ಪಾಟೀಲ್ ತಿಳಿಸಿದರು.