ಗದಗ: ಪ್ರವಾಹ ಭೀತಿ ಹಿನ್ನೆಲೆ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪೂರ ಗ್ರಾಮದ ಜನರನ್ನು ಮುನ್ನೆಚ್ಚರಿಕಾ ಕ್ರಮವಾಗಿ ಪಕ್ಕದ ಬೆಳ್ಳೇರಿ ಗ್ರಾಮದ ಪರಿಹಾರ ಕೇಂದ್ರಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಆದರೆ ಖುದ್ದು ಸಚಿವರೇ ಮುಂದಾಗಿ, ನಿಮ್ಮ ಕಾಲು ಮುಗಿತೀನಿ ಹೋಗ್ರಪ್ಪಾ ಎಂದು ಮನವಿ ಮಾಡಿದರೂ ಸಹ ಗ್ರಾಮಸ್ಥರು ಮಾತ್ರ ಒಪ್ಪುತ್ತಿಲ್ಲ.
ನಿಮ್ಮ ಕಾಲು ಮುಗಿತೀನಿ ಪರಿಹಾರ ಕೇಂದ್ರಕ್ಕೆ ಹೋಗ್ರಪ್ಪಾ: ಸಚಿವ ಸಿ.ಸಿ. ಪಾಟೀಲ ಮನವಿ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪೂರ ಗ್ರಾಮ ಸಂಪೂರ್ಣ ನಡುಗಡ್ಡೆ ಆಗುವ ಭೀತಿ ಎದುರಾಗಿದೆ. ಹಾಗಾಗಿ ಜಿಲ್ಲಾಡಳಿತ ಈ ಗ್ರಾಮದ ಜನರನ್ನು ಬೇರೆಡೆ ಸ್ಥಳಾಂತರ ಮಾಡಲು ನಿರ್ಧರಿಸಿದೆ. ಪಕ್ಕದ ಹಳ್ಳಿ ಬೆಳ್ಳೇರಿಯಲ್ಲಿ ಜಿಲ್ಲಾಡಳಿತ ಪರಿಹಾರ ಕೇಂದ್ರ ತೆರೆದಿದ್ದು, ಅಲ್ಲಿಗೆ ಲಖಮಾಪೂರ ಗ್ರಾಮದ ಜನರನ್ನು ಸ್ಥಳಾಂತರ ಮಾಡಲು ನಿರ್ಧರಿಸಿದೆ. ಆದರೆ ಇಲ್ಲಿನ ಜನರು ಮಾತ್ರ ಬೇರೆಡೆ ತೆರಳಲು ಸಿದ್ಧರಿಲ್ಲ.
ಲಖಮಾಪೂರ ಗ್ರಾಮದ ಜನ ತಮ್ಮ ಊರಿನ ಪಕ್ಕದ ಎತ್ತರದ ಪ್ರದೇಶದಲ್ಲಿ ಶೆಡ್ ವ್ಯವಸ್ಥೆ ಮಾಡಿಕೊಡಿ. ಆದರೆ ಬೇರೆ ಕಡೆ ಮಾತ್ರ ತೆರಳುವುದಿಲ್ಲ ಅಂತ ಹಠ ಹಿಡಿದಿದ್ದಾರೆ. ಈ ಹಿನ್ನೆಲೆ ಸಚಿವ ಸಿ.ಸಿ. ಪಾಟೀಲ ತಾವೇ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಮುಂದಾದರು. ಆದರೆ, ಈ ವೇಳೆ ಕಳೆದ ವರ್ಷದ ಜಿಲ್ಲಾಡಳಿತದ ವೈಫಲ್ಯವನ್ನು ಜನರು ಸಚಿವರಿಗೆ ಮನದಟ್ಟು ಮಾಡಿಕೊಟ್ಟರೇ ಹೊರತು ಆ ಸ್ಥಳದಿಂದ ಜಾಗ ಖಾಲಿ ಮಾಡಲು ಒಪ್ಪಲಿಲ್ಲ.
ಈ ವೇಳೆ ಸಚಿವ ಸಿ.ಸಿ. ಪಾಟೀಲ, ಹಿಂದಿನದ್ದು ಬಿಡಿ.. ನಿಮ್ಮ ಕಾಲು ಮುಗಿತೀನಿ, ಎರಡು ದಿನ ಬೆಳ್ಳೇರಿ ಪರಿಹಾರ ಕೇಂದ್ರದಲ್ಲಿ ಉಳಿದುಕೊಳ್ಳಿ ಅಂತ ಮನವಿ ಮಾಡಿಕೊಂಡ ಘಟನೆ ನಡೆಯಿತು. ಕಳೆದ ಬಾರಿಯೇ ಶೆಡ್ ನಿರ್ಮಾಣ ಮಾಡಿ ಕೊಡಲು ಜಿಲ್ಲಾಡಳಿತ ಮತ್ತು ಸಚಿವ ಸಿ.ಸಿ. ಪಾಟೀಲ ಆಶ್ವಾಸನೆ ಕೊಟ್ಟಿದ್ದರು. ಅದ್ರೆ ಶೆಡ್ ನಿರ್ಮಾಣ ಮಾಡಿಕೊಟ್ಟಿರಲಿಲ್ಲ. ಇದೇ ಕಾರಣಕ್ಕೆ ಜನ ಸ್ಥಳಾಂತರಕ್ಕೆ ಒಪ್ಪುತ್ತಿಲ್ಲ ಎಂಬುದು ಅಲ್ಲಿನ ಜನರ ವಾದ.