ಗದಗ : ಲಾಕ್ಡೌನ್ ಬಳಿಕ ನಡೆದ ಮೊದಲ ಕೆಡಿಪಿ ಸಭೆಯಲ್ಲಿ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಗೋಲ್ಮಾಲ್ ನಡೆದಿರುವ ಕುರಿತು ಆರೋಪಗಳು ವ್ಯಕ್ತವಾಗುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ ಅಕ್ರಮ ಎಸಗಿದ್ದು ಪತ್ತೆಯಾದರೆ ಸಸ್ಪೆಂಡ್ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಭೆ ಆರಂಭವಾಗುತ್ತಿದ್ದಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶ್ ಅವರಿಗೆ ಚಳಿ ಬಿಡಿಸಿದರು. ಜಿಲ್ಲೆಯಲ್ಲಿ ಸುಮಾರು 1700 ರೈತರಿಗೆ ಕೃಷಿ ಉಪಕರಣಗಳನ್ನು ಸಬ್ಸಿಡಿ ಮೂಲಕ ವಿತರಿಸಲಾಗಿದೆ. ಆದರೆ ಇವು ನಿಜವಾದ ಫಲಾನುಭವಿಗಳಿಗೆ ತಲುಪಿಲ್ಲ. ಬದಲಾಗಿ ಪ್ರಭಾವಿಗಳು ಪ್ರತಿ ವರ್ಷ ಬೇರೊಬ್ಬ ರೈತನ ಹೆಸರಲ್ಲಿ ಪಡೆದುಕೊಂಡು ಸರಕಾರಕ್ಕೆ ಮೋಸ ಮಾಡ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಿ ಅಂತಾ ಜಿಲ್ಲಾಧಿಕಾರಿ ಸುಂದರೇಶಬಾಬು ಮತ್ತು ಸಿಇಓ ಪ್ರಸಾದ್ ಅವರಿಗೆ ಸೂಚನೆ ನೀಡಿದರು.
ಗೋಲ್ಮಾಲ್ ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿ.ಸಿ. ಪಾಟೀಲ ಇನ್ನು ಸಚಿವರ ಅನುಮಾನಕ್ಕೆ ಸೂಕ್ತ ಉತ್ತರ ನೀಡದೆ ಜೆಡಿಎ ರುದ್ರೇಶ್ ಅವರು ತಡಬಡಿಸಿದರು. ಇನ್ನು ಹೊರಗುತ್ತಿಗೆ ನೌಕರರ ಭವಿಷ್ಯ ನಿಧಿಯಲ್ಲಿ ಭಾರಿ ಗೋಲ್ಮಾಲ್ ನಡೆದಿದೆ ಅಂತ ಸಂಶಯ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರ್ಗಪ್ಪನವರ ವಿರುದ್ಧ ಹರಿಹಾಯ್ದರು. ಇಲಾಖೆಯ ಬಹುತೇಕ ಸಿಬ್ಬಂದಿ ಹೊರಗುತ್ತಿಗೆ ನೌಕರರಿದ್ದು ಅವರಿಗೆ ಕೊಡುವ ಭವಿಷ್ಯ ನಿಧಿಯನ್ನು ತುಂಬುವಲ್ಲಿ ಎಜೆನ್ಸಿಗಳು ಮತ್ತು ಅಧಿಕಾರಿಗಳು ಸೇರಿ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಂತವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ಬಗ್ಗೆ ತಪ್ಪು ಮಾಡಿದ ಏಜೆನ್ಸಿಯನ್ನು ಬ್ಲಾಕ್ ಲಿಸ್ಟ್ಗೆ ಹಾಕಬೇಕು ಅಂತ ಖಡಕ್ ಎಚ್ಚರಿಕೆ ನೀಡಿದರು. ಅಲ್ಲದೆ ಒಂದು ತಿಂಗಳಲ್ಲಿ ಈ ಬಗ್ಗೆ ಫಲಶೃತಿ ನೀಡುತ್ತೇನೆ ಅಂತ ತಿಳಿಸಿದರು. ಇನ್ನು ಯಾವ ಇಲಾಖೆಯಲ್ಲಿ ಗೋಲ್ಮಾಲ್ ಆಗಿರತ್ತೊ ಆ ಇಲಾಖೆಯ ಮುಖ್ಯಸ್ಥರ ವಿರುದ್ಧವೂ ಶಿಸ್ತು ಕ್ರಮದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಗದಗ ಜಿಲ್ಲೆಯ 32 ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಿದ್ದು, ಈಗಾಗಲೇ 27 ಇಲಾಖೆ ವಿರುದ್ಧ ಪ್ರಕರಣ ದಾಖಲಾಗಿದೆ.