ಗದಗ:ಯಾರೋ ಟೀಕೆ ಮಾಡುತ್ತಾರೆಂದು ಮುಖ್ಯಮಂತ್ರಿಗಳು ನಡು ರಸ್ತೆಯಲ್ಲಿ ಲಾಠಿ ಹಿಡಿದು ನಿಲ್ಲಲು ಸಾಧ್ಯವಿಲ್ಲಾ. ಯಾವುದೋ ಸರ್ಕಲ್ನಲ್ಲಿ ನಿಂತು ಚರ್ಚೆ ಮಾಡುವ ಅಗತ್ಯವೂ ಇಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಇಲ್ಲಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ಗೋಶಾಲೆ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಸವಣ್ಣನೂ ಹೌದು, ಬಸವರಾಜೂ ಹೌದು. ಆದರೆ, ಮೂಖ ಬಸವಣ್ಣ ಅಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಆದರೂ, ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿಗಳು ಮಧ್ಯೆ ಪ್ರವೇಶ ಮಾಡುತ್ತಿಲ್ಲ ಎಂಬ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.