ಗದಗ: ಮಲಪ್ರಭಾ ಅಬ್ಬರಕ್ಕೆ ಜಿಲ್ಲೆಯ ನರಗುಂದ ತಾಲೂಕಿನ ಲಖಮಾಪುರ ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಸ್ಥಳೀಯರಿಗೆ ಅಲ್ಲಿನ ಸೇತುವೆಯೇ ಕಂಟಕವಾಗಿದೆ. ಹೀಗಾಗಿ ಮಲಪ್ರಭಾ ನದಿ ಉಕ್ಕಿ ಹರಿದ್ರೆ ಸಾಕು ಇಡೀ ಗ್ರಾಮವೇ ನಡುಗಡ್ಡೆಯಾಗುತ್ತೆ. ಸತತ ಮೂರು ವರ್ಷಗಳಿಂದ ಆ ಗ್ರಾಮಸ್ಥರ ಬದುಕೇ ಮೂರಾಬಟ್ಟೆಯಾಗಿದೆ. ಸೇತುವೆ ನಿರ್ಮಾಣ ಮಾಡಿ ಅನ್ನೋ ಕೂಗು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲ. ಕಾಮಗಾರಿಗೆ ವರ್ಷದ ಹಿಂದೆಯೇ ಭೂಮಿ ಪೂಜೆ ಮಾಡಲಾಗಿದೆ. ಆದರೆ, ವರ್ಷ ಕಳೆದ್ರೂ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಗ್ರಾಮಸ್ಥರು ಕಿಡಿಕಾರಿದ್ದಾರೆ.
ಮೂರು ವರ್ಷದಿಂದ ಪ್ರವಾಹ:
2019 ಹಾಗೂ 2020ರಲ್ಲಿ ಭೀಕರ ಪ್ರವಾಹಕ್ಕೆ ಸಿಲುಕಿದ್ದ ಲಖಮಾಪುರ ಗ್ರಾಮದ ಜನರ ಬದುಕೇ ಬುಡಮೇಲಾಗಿತ್ತು. ಈಗ ಮತ್ತೆ ಮಲಪ್ರಭಾ ಅಬ್ಬರಕ್ಕೆ ಲಖಮಾಪುರದ ಸುತ್ತಲು ಅಪಾರ ಪ್ರಮಾಣದ ನೀರು ಸುತ್ತುವರೆದಿದ್ದರಿಂದ ಗ್ರಾಮ ಈಗ ನಡುಗಡ್ಡೆಯಾಗಿದೆ. ಇಡೀ ಗ್ರಾಮಸ್ಥರು ಊರು ತೊರೆದಿದ್ದಾರೆ. ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವರಾಗಿರುವ ಸಿ ಸಿ ಪಾಟೀಲ್ ವಿರುದ್ಧ ಇಲ್ಲಿನ ಜನರು ಗರಂ ಆಗಿದ್ದಾರೆ.
ಲಖಮಾಪುರ ಗ್ರಾಮ ಸುತ್ತುವರೆದ ಮಲಪ್ರಭಾ ಪ್ರವಾಹ ಸೇತುವೆ ನಿರ್ಮಾಣದ ಭರವಸೆ:
ಕಳೆದ ವರ್ಷ ಸಚಿವರಾಗಿದ್ದಾಗ ಸಿ ಸಿ ಪಾಟೀಲ್ ಗ್ರಾಮದ ಬಳಿ ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು. ಅಂದು ಭೂಮಿ ಪೂಜೆ ಕೂಡ ಮಾಡಿ ಹೋಗಿದ್ದ ಸಚಿವರು ಇವತ್ತಿಗೂ ಗ್ರಾಮದ ಮುಖ ನೋಡಿಲ್ಲಾ ಅಂತ ಜನ ಕಿಡಿಕಾರಿದ್ದಾರೆ. ಸೇತುವೆ ಕಾಮಗಾರಿ ಕೂಡಾ ಇನ್ನೂ ಆರಂಭವಾಗಿಲ್ಲ. ಇದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ. ನಮ್ಮ ಬಗ್ಗೆ ಶಾಸಕರಿಗೆ, ಸರ್ಕಾರಕ್ಕೆ ಯಾಕೆ ಮಲತಾಯಿ ಧೋರಣೆ ಎಂದು ಪ್ರಶ್ನಿಸಿದ್ದಾರೆ. ಪ್ರತಿ ವರ್ಷ ಊರು ತೊರೆಯಬೇಕಾದ ಪರಿಸ್ಥಿತಿ ಉದ್ಭವವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಶಾಶ್ವತ ಪರಿಹಾರಕ್ಕೆ ಆಗ್ರಹ:
ಸೇತುವೆ ನಿರ್ಮಾಣ ಮಾಡಿದರೆ ಸಾಕು, ನಮಗೆ ಪ್ರವಾಹದಿಂದ ತೊಂದರೆ ಆಗಲ್ಲ. ಎಂಥಾ ಪ್ರವಾಹ ಬಂದ್ರೂ ಗ್ರಾಮದ ಮನೆಗಳಿಗೆ ನೀರು ನುಗ್ಗಲ್ಲ. ಗ್ರಾಮದ ಮುಂದಿನ ಸೇತುವೆ ಎತ್ತರಕ್ಕೆ ಕಟ್ಟಿದ್ರೆ ಸಾಕು. ನೀರು ಹರಿದು ಹೋಗುತ್ತೆ. ಆದ್ರೆ, ಪ್ರತಿ ವರ್ಷ ಪ್ರವಾಹ ಬಂದಾಗಲೂ ಅದೇ ರಾಗ ಅದೇ ಹಾಡು ಎಂಬಂತೆ ಸೇತುವೆ ನಿರ್ಮಾಣ ಮಾಡ್ತೀವಿ, ಇದೊಂದು ಬಾರಿ ಕಾಳಜಿ ಕೇಂದ್ರಕ್ಕೆ ಬನ್ನಿ ಎಂದು ಅಧಿಕಾರಿಗಳು ಓಡೋಡಿ ಬರ್ತಾರೆ. ಆದರೆ, ಎಷ್ಟು ವರ್ಷ ಅಂತ ಇದೇ ರೀತಿ ಅಲೆದಾಡಬೇಕು ಅನ್ನೋದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಇಲ್ಲಾಂದ್ರೆ ನಮ್ಮ ಗ್ರಾಮವನ್ನೇ ಶಾಶ್ವತವಾಗಿ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ.