ಗದಗ :ಪ್ರತಿವರ್ಷ ಗದಗದಲ್ಲಿ ಮಲಪ್ರಭಾ ನದಿಯ ಪ್ರವಾಹ ಜನರನ್ನ ಸಂಕಷ್ಟದ ಮೇಲೆ ಸಂಕಷ್ಟಕ್ಕೆ ದೂಡುತ್ತಿದೆ. ಕಳೆದ ವರ್ಷದ ನೆರೆ ಇಡೀ ಊರಿಗೆ ಊರನ್ನೇ ದಿಕ್ಕಾಪಾಲಾಗುವಂತೆ ಮಾಡಿತ್ತು. ಈಗ ಮತ್ತದೇ ರಕ್ಕಸ ಪ್ರವಾಹ ಬಂದು ಜನರನ್ನು ಗೋಳಾಡಿಸುತ್ತಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಖಾಜಿ ಓಣಿಯಲ್ಲಿ ಜನ ಪ್ರವಾಹದಿಂದ ಅಕ್ಷರಶಃ ನಲುಗಿ ಹೋಗಿದ್ದಾರೆ. ಕೊಣ್ಣೂರ ಗ್ರಾಮದ ವಿಕಲಚೇತನ ವೃದ್ಧ ಅಹ್ಮದ್ ಸಾಬ್ ಖಾಜಿಯವರದು ಐದು ಮಕ್ಕಳ ತುಂಬು ಕುಟುಂಬ. ಕಳೆದ ವರ್ಷದ ಭೀಕರ ಪ್ರವಾಹಕ್ಕೆ ಇಡೀ ಮನೆ ಮುಳುಗಿ ಬದುಕೇ ಬರ್ಬಾದ್ ಆಗಿತ್ತು. ಇವರ ಮನೆ ಜೊತೆಗೆ ಖಾಜಿ ಓಣಿಯ ನೂರಾರು ಮನೆಗಳು ಪ್ರವಾಹದಲ್ಲಿ ಮುಳುಗಿದ್ದವು. ಆಗ ಮನೆ ಕಳೆದುಕೊಂಡವ್ರಿಗೆ ಸರ್ಕಾರ ಎ, ಬಿ, ಸಿ ಗ್ರೇಡ್ ನೀಡಿತ್ತು. ಈ ಅಹ್ಮದ್ ಖಾನ್ ಖಾಜಿ ಮನೆ ಕೂಡ ಸರ್ವೆ ಮಾಡಿದ ಇಂಜಿನಿಯರ್ ಶೇ. 85 ರಷ್ಟು ಡ್ಯಾಮೇಜ್ ಅಂತ ವರದಿ ನೀಡಿದ್ದಾರಂತೆ. ಆದ್ರೂ ಇನ್ನೂ ಪರಿಹಾರ ನೀಡಿಲ್ಲವಂತೆ.
ಅಕ್ಕಪಕ್ಕದ ಮನೆಗಳಿಗೆ 5 ಲಕ್ಷ ಪರಿಹಾರ ನೀಡಲಾಗಿದ್ದು, ಅವರೆಲ್ಲಾ ಮನೆ ನಿರ್ಮಾಣ ಮಾಡ್ತಿದ್ದಾರೆ. ಆದ್ರೆ ಈ ವಿಕಲಚೇತನ ವ್ಯಕ್ತಿಯ ಮನೆ ಬೀಳುವ ಹಂತ ತಲುಪಿರುವುದರಿಂದ ಈ ಕುಟುಂಬ ಊರ ಹೊರಗೆ ಜೀವನ ಮಾಡುತ್ತಿದೆ. ಅಧಿಕಾರಿಗಳ ಯಡವಟ್ಟೋ, ಸ್ಥಳೀಯ ರಾಜಕಾರಣವೋ ಗೊತ್ತಿಲ್ಲ. ಈ ಕುಟುಂಬಕ್ಕೆ ಮಾತ್ರ ಪರಿಹಾರ ಇನ್ನೂ ಸಿಕ್ಕಿಲ್ಲ. ಪರಿಹಾರಕ್ಕಾಗಿ ಗ್ರಾ. ಪಂ. ತಾಲೂಕು ಪಂಚಾಯತ್, ಎಸಿ, ಡಿಸಿ ಕಚೇರಿ ವರೆಗೂ ಈ ವಿಕಲಚೇತನ ಕುಟುಂಬ ಅಲೆದಾಡಿದ್ರೂ ಯಾರೂ ಕರುಣೆ ತೋರಿಲ್ಲ.
ಇನ್ನು ರಬಿಯಾ ಬೇಗಂ ಎಂಬ ಮಹಿಳೆ ಪತಿಯನ್ನು ಕಳೆದುಕೊಂಡಿದ್ದು ಮಕ್ಕಳನ್ನು ಸಾಕಲು ಹರಸಾಹಸ ಪಡುತ್ತಿದ್ದಾರೆ. ಇತ್ತ ಸತತ ಎರಡು ವರ್ಷದ ಭೀಕರ ಪ್ರವಾಹಕ್ಕೆ ಮನೆಯಲ್ಲಿ ನೀರು ನಿಂತು ಮನೆ ಬೀಳುವ ಹಂತಕ್ಕೆ ತಲುಪಿದೆ. ಯಾವಾಗ ಏನಾಗುತ್ತೋ ಅನ್ನೋ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಕಳೆದ ವರ್ಷ ಪ್ರವಾಹದ ಪರಿಹಾರವನ್ನೇ ಅಧಿಕಾರಿಗಳು ಇನ್ನೂ ನೀಡಿಲ್ಲ. ಈಗ ಮತ್ತೆ ಪ್ರವಾಹ ಬಂದು ನಮ್ಮ ಜೀವನ ಹಾಳಾಗಿದೆ ಅಂತ ಮಹಿಳೆ ಕಣ್ಣೀರು ಹಾಕುತ್ತಿದ್ದಾರೆ.