ಗದಗ: ಮಲಪ್ರಭಾ ಆರ್ಭಟಕ್ಕೆ ಈ ಕುಟುಂಬ ಬೀದಿಗೆ ಬಿದ್ದಿದೆ. ತಾಯಿ, ಮಗಳು ಇಬ್ಬರೇ ಬದುಕಿನ ನೊಗ ಹೊತ್ತು ಸಾಗುತ್ತಿದ್ದ ಬಂಡಿಗೆ ಕೊಡಲಿ ಪೆಟ್ಟು ನೀಡಿದೆ. ಗಂಡೇ ದಿಕ್ಕಿಲ್ಲದ ಕುಟುಂಬಕ್ಕೆ ಆಸರೆ, ನೆರವಿನ ಅವಶ್ಯಕತೆ ಇದೆ.
ಶಾಶ್ವತ ಪರಿಹಾರಕ್ಕೆ ಸಂತ್ರಸ್ತರ ಆಗ್ರಹ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ನಿವಾಸಿಗಳಾದ ಬೀಬಿಜಾನ್ ಹಾಗೂ ಮಗಳು ಸೈನಾಜಬಿ ಪ್ರವಾಹದಿಂದ ಸೂರನ್ನು ಕಳೆದುಕೊಂಡಿದ್ದಾರೆ. ತಾತ್ಕಾಲಿಕವಾಗಿ ಸರ್ಕಾರದ ಆಶ್ರಯ ಪಡೆದಿದ್ದಾರೆ.
ಜೀವನೋಪಾಯಕ್ಕೆ ಟೈಲರಿಂಗ್ ಮಾಡುತ್ತ ಬೀಬಿಜಾನ್ ಬದುಕು ಕಟ್ಟಿಕೊಳ್ಳುವ ಜೊತೆಗೆ ಮಗಳನ್ನು ಓದಿಸುತ್ತಿದ್ದರು. ಮೂರು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡ ನಂತರ ಮಗಳ ಭವಿಷ್ಯಕ್ಕಾಗಿಯೇ ಹಗಲಿರುಳು ಶ್ರಮಿಸುತ್ತಿದ್ದರು. ಈಗ ಪ್ರವಾಹದಿಂದ ವಾಸವಿದ್ದ ಪುಟ್ಟ ಗುಡಿಸಲು ನೀರಲ್ಲಿ ಮುಳುಗಿದ್ದು, ನಿರಾಶ್ರಿತರಾಗಿದ್ದಾರೆ. ನಿತ್ಯ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ನಮಗೆ ತಾತ್ಕಾಲಿಕ ಯಾವುದೇ ಪರಿಹಾರ, ಹಣ ಬೇಡ. ಸುರಕ್ಷಿತ ಸ್ಥಳದಲ್ಲಿ ಪುಟ್ಟದೊಂದು ಸೂರು ನಿರ್ಮಿಸಿ ಕೊಡಿ. ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಕಳೆದ ವರ್ಷವೂ ಇದೇ ರೀತಿ ಪ್ರವಾಹದಿಂದ ಸಂಕಷ್ಟಕ್ಕೆ ತಲುಪಿದ್ದೆವು. ದಯವಿಟ್ಟು ಶಾಶ್ವತ ಪರಿಹಾರ ನೀಡಿ ಎಂದು ಸರ್ಕಾರಕ್ಕೆ ಅಲವತ್ತುಕೊಂಡರು.
ಮಲಪ್ರಭಾ ಪ್ರವಾಹಕ್ಕೆ ಜಿಲ್ಲೆಯ 16 ಗ್ರಾಮಗಳ, ನೂರಾರು ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಇರಿಸಿಕೊಂಡು ಎಲ್ಲೆಲ್ಲಿ ತಿರುಗಾಡಬೇಕು. ಸರ್ಕಾರ ಬಡವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.