ಗದಗ: ಲಾಕ್ಡೌನ್ನಿಂದಾಗಿ ನೇಕಾರಿಕೆಯನ್ನೇ ನಂಬಿಕೊಂಡು ಬದುಕುತ್ತಿದ್ದ ಕುಟುಂಬವೊಂದು, ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಕುಟುಂಬಕ್ಕೆ ಆಧಾರವಾಗಿದ್ದ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಜೀವನವೆಂಬ ಚಕ್ಕಡಿಯ ಚಕ್ರವೊಂದು ಮುರಿದು ಬಿದ್ದಂತಾಗಿದೆ. ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
ಲಾಕ್‌ಡೌನ್ ವೇಳೆ ಸರ್ಕಾರ ಘೋಷಣೆ ಮಾಡಿದ್ದ ಪರಿಹಾರ ನಯಾ ಪೈಸೆ ಬಂದಿಲ್ಲ, ಹೊತ್ತಿನ ಊಟ, ಮಕ್ಕಳ ಶಿಕ್ಷಣ, ಜೀವನೋಪಾಯಕ್ಕಾಗಿ ಸಹಾಯ ಬೇಡುತ್ತಾ ನೇಕಾರನ ಕುಟುಂಬ ಪರಿತಪಿಸುತ್ತಿದೆ.
ಗದಗಿನ ಬೆಟಗೇರಿಯಲ್ಲಿ 51 ವರ್ಷದ ದುರವಾಸಪ್ಪ ಶ್ಯಾಗಾವಿ ಎಂಬ ನೇಕಾರ ಅನಾರೋಗ್ಯದಿಂದ ಬಳಲುತ್ತಿದ್ದು, ಕಿಡ್ನಿ ಹಾಗೂ ಹೃದಯ ರೋಗ ಕಾಯಿಲೆಯಿಂದ ಬಳಲುತ್ತಾ ನೆಲಕಚ್ಚಿದ್ದಾನೆ. ಕುಟುಂಬದಲ್ಲಿ ಒಟ್ಟು 7 ಜನ ಸದಸ್ಯರಿದ್ದು, ಮನೆಗೆ ಅವರೇ ಆಧಾರವಾಗಿದ್ದರು. ಇದರಿಂದಾಗಿ ಯಾರಾದ್ರೂ ಸಹಾಯ ಮಾಡಿ ಎಂದು ಕಣ್ಣೀರಿಡುತ್ತಿದೆ ನೊಂದ ಕುಟುಂಬ.
ಮನೆಯಲ್ಲಿ 5 ಜನ ಚಿಕ್ಕಪುಟ್ಟ ಹೆಣ್ಣು ಮಕ್ಕಳಿದ್ದು, ಇವರೆಲ್ಲಾ ಕೈಮಗ್ಗದಿಂದ ಬಟ್ಟೆಯನ್ನು ನೇಯ್ದು ಜೀವನ ನಡೆಸುತ್ತಿದ್ದರು. ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಿಡಿಕಾಸಿಲ್ಲದಂತಾಗಿದ್ದು, ಕೈಮಗ್ಗ ಬಳಿ ತಂದೆಯನ್ನು ಮಲಗಿಸಿ ಮಕ್ಕಳು ಕಣ್ಣೀರಿಡುತ್ತಿದ್ದಾರೆ. ಯಾರಾದ್ರೂ ದಾನಿಗಳು, ಸಂಘ ಸಂಸ್ಥೆ ಅಥವಾ ಸರ್ಕಾರ ಈ ಬಡಕುಟುಂಬಕ್ಕೆ ನೇರವಾಗಬೇಕಿದೆ ಅಂತಿದ್ದಾರೆ ಸ್ಥಳಿಯರು.
ಲಕ್ಷಾಂತರ ರೂಪಾಯಿ ಖರ್ಚುಮಾಡಿ ಚಿಕಿತ್ಸೆ ನೀಡಿದ್ರೂ ದುರವಾಸಪ್ಪ ಗುಣಮುಖವಾಗಿಲ್ಲ. ಚಿಕ್ಕಮನೆಯಲ್ಲಿ ಕೈ ಮಗ್ಗದ ಮೇಲೆ 7 ಜನ ಅವಲಂಬಿತರಾಗಿದ್ದು, ಸದ್ಯ ಹೊತ್ತಿನ ಚೀಲ ತುಂಬಿಸಿಕೊಳ್ಳಲು ಪರಿತಪಿಸುತ್ತಿದ್ದಾರೆ. ಮಕ್ಕಳ ಶಿಕ್ಷಣ, ವ್ಯಕ್ತಿಯ ಚಿಕಿತ್ಸೆ ವೆಚ್ಚ, ಆರ್ಥಿಕ ಸಹಾಯಕ್ಕಾಗಿ ಕೈಚಾಚಿ, ಅಂಗಲಾಚಿ ಬೇಡಿಕೊಳ್ಳುತ್ತಿದೆ ನೇಕಾರನ ನೊಂದ ಕುಟುಂಬ. ಹೃದಯವಂತ ದಾನಿಗಳು ನೊಂದ ಕುಟುಂಬಕ್ಕೆ ನೇರವಾಗಲಿ ಎಂಬುದು ನಮ್ಮ ಆಶಯ.