ಗದಗ: ಅಪಾರ ಆಯುರ್ವೇದ ಗಿಡಮೂಲಿಕೆ ಮತ್ತು ಖನಿಜ ಸಂಪತ್ತು ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹೊಂಚು ಹಾಕಿ ಕುಳಿತಿದ್ದು, ಇದಕ್ಕೆ ಅವಕಾಶ ಮಾಡಿಕೊಡದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿಗಳು ಸುದೀರ್ಘ ಪತ್ರ ಬರೆದಿದ್ದಾರೆ. ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಹಸಿರು ಸಹ್ಯಾದ್ರಿ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. ಭೂಗಳ್ಳರಿಂದ ಕಪ್ಪತ್ತಗುಡ್ಡವನ್ನು ಉಳಿಸುವಂತೆ ಶ್ರೀಗಳು ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಪ್ಪತ್ತಗುಡ್ಡದಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಹಲವು ಕಂಪನಿಗಳು ಹೊಂಚು ಹಾಕಿ ಕುಳಿತಿವೆ. ಅರಣ್ಯ ಇಲಾಖೆ ಇವರ ಅರ್ಜಿ ತಿರಸ್ಕರಿಸಿದರೂ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡುವಂತೆ ಪದೇ ಪದೇ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಬೆನ್ನು ಬಿದ್ದಿದ್ದಾರೆ. ಸದ್ಯ ವನ್ಯಜೀವಿ ಧಾಮದ ಕಾನೂನು ಪ್ರಕಾರ 10 ಕಿ.ಮೀ.ವ್ಯಾಪ್ತಿ ಯಾವುದೇ ಗಣಿಗಾರಿಕೆಗೆ ಅನುಮತಿ ನೀಡುವಂತಿಲ್ಲ. ಆದರೆ ಇದನ್ನು ಒಂದು ಕಿ.ಮೀ.ವ್ಯಾಪ್ತಿಗೆ ಇಳಿಸುವಂತೆ ಭೂಗಳ್ಳರು ಒಳಸಂಚು ರೂಪಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಗಣಿಗಾರಿಕೆ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು:ಖಾಸಗಿ ಕಂಪನಿಯೊಂದು ಸದ್ಯ ಹೈಕೋರ್ಟಿನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಕೆ ಮಾಡಿದೆ. ಶತಾಯಗತಾಯ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಈ ಮೂಲಕ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ನಮ್ಮ ಸಂಪತ್ತು ನಮ್ಮ ಹೊಣೆ. ಅದನ್ನು ಉಳಿಸಿ, ಬೆಳೆಸಿ, ಬಳಸಬೇಕು. ಪದೇ ಪದೇ ಕಪ್ಪತ್ತಗುಡ್ಡಕ್ಕೆ ಕಂಟಕ ತರುತ್ತಿರುವ ಗಣಿಗಾರಿಕೆ ಕಂಪನಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶ್ರೀಗಳು ಪತ್ರದ ಮೂಲಕ ಒತ್ತಾಯಿಸಿದ್ದಾರೆ.