ಗದಗ:ವೃದ್ಧನೊಬ್ಬ ದೇವರ ಪೂಜೆಗೆಂದು ಹೂ ತರಲು ಹೋದ ವೇಳೆ ಭೂಮಿ ಕುಸಿದ ಪರಿಣಾಮ ಗಾಯಗೊಂಡ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ಕಸಬಾ ಓಣಿಯಲ್ಲಿ ಸಂಭವಿಸಿದೆ.
ರತ್ನಾಕರ ದೇಶಪಾಂಡೆ ಎಂಬ ವ್ಯಕ್ತಿ ಪ್ರಾಣಾಪಾಯದಿಂದ ಪಾರಾದವರು. ಮುಂಜಾನೆ ತಮ್ಮ ಮನೆಯ ಹಿತ್ತಿಲಿಗೆ ಹೂಗಳನ್ನು ತರಲೆಂದು ಇವರು ತೆರಳಿದ್ದರು. ಈ ವೇಳೆ ತಾನು ನಿಂತಿದ್ದ ಸ್ಥಳ ದಿಢೀರ್ ಕುಸಿದು ಸುಮಾರು 14-15 ಅಡಿ ಆಳದಲ್ಲಿ ಅವರು ಸಿಲುಕಿಕೊಂಡಿದ್ದರು. ಬಳಿಕ ಮನೆಯವರು ಹಾಗೂ ಸ್ಥಳೀಯರು ರತ್ನಾಕರ ಅವರನ್ನು ರಕ್ಷಿಸಿದ್ದಾರೆ.
ಹೂ ತರಲು ಹೋಗಿದ್ದಾಗ ಭೂ ಕುಸಿತ... 14-15 ಅಡಿ ಆಳಕ್ಕೆ ಹೋದ ವೃದ್ಧ ಸದ್ಯ ರತ್ನಾಕರ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಚಿವರು ಈ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ತನಿಖೆ ನಡೆಸುವಂತೆ ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಘಟನೆಗೆ ಕಾರಣ?:
ಕಳೆದ ಕೆಲ ತಿಂಗಳುಗಳಿಂದ ನರಗುಂದ ಪಟ್ಟಣದಲ್ಲಿ ಸತತ ಮಳೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿದೆ. ಹೀಗಾಗಿ ಪಟ್ಟಣದಲ್ಲಿ ಹಿಂದಿನ ಕಾಲದ ಹಗೆಗಳು (ಧಾನ್ಯಗಳನ್ನು ಸಂಗ್ರಹಿಸಲು ನೆಲದಲ್ಲಿ ನಿರ್ಮಿಸಲಾಗುವ ಸಂಗ್ರಹಗಾರ) ಕುಸಿಯುತ್ತಿವೆ. ನರಗುಂದದ ಕಸಬಾ ಓಣಿಯಲ್ಲೂ ಇದೇ ರೀತಿ ಸಂಭವಿಸಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.