ಗದಗ: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಐತಿಹಾಸಿಕ ಲಕ್ಕುಂಡಿ ಉತ್ಸವವು ಫೆಬ್ರವರಿ 10,11,12 ರಂದು ನಡೆಯಲಿದೆ. ಉತ್ಸವದ ಮೊದಲನೇ ದಿನವಾದ ಫೆಬ್ರುವರಿ 10 ರಂದು ಬೆಳಗ್ಗೆ 10 ಗಂಟೆಗೆ ಲಕ್ಕುಂಡಿಯ ಸರ್ಕಾರಿ ಮಾದರಿ ಪ್ರೌಢಶಾಲೆ ಆವರಣದಲ್ಲಿ ಜಾನಪದ ಕಲಾವಾಹಿನಿ ಮೆರವಣಿಗೆಯ ಉದ್ಘಾಟನೆ ಜರುಗಲಿದೆ ಎಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ತಿಳಿಸಿದೆ. ಮೆರವಣಿಗೆಯು ವಿವಿಧ ಜನಪದ ಕಲಾ ತಂಡಗಳೊಂದಿಗೆ ಸರ್ಕಾರಿ ಪ್ರೌಢ ಶಾಲೆ ಆವರಣದಿಂದ ಪ್ರಾರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದಾನಚಿಂತಾಮಣಿ ಅತ್ತಿಮಬ್ಬೆ ವೇದಿಕೆಗೆ ಆಗಮಿಸಲಿದೆ.
ಲೋಕೋಪಯೋಗಿ ಇಲಾಖೆ ಸಚಿವ ಸಿಸಿ ಪಾಟೀಲ್ ಜಾನಪದ ಕಲಾವಾಹಿನಿಯ ಮೆರವಣಿಗೆಯನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಂಸಿಎ ನಿಗಮದ ಅಧ್ಯಕ್ಷ ಎಂ.ಎಸ್.ಕರಿಗೌಡ್ರ, ಲಕ್ಕುಂಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಲಿತಾ ಅಶೋಕ ಗದಗಿನ, ಉಪಾಧ್ಯಕ್ಷ ರೇವಣಸಿದ್ದಪ್ಪ ಶೇಖಪ್ಪ ಮುಳಗುಂದ ಹಾಗೂ ಲಕ್ಕುಂಡಿ ಗ್ರಾಮ ಪಂಚಾಯತ್ ಸರ್ವ ಸದಸ್ಯರು, ಸ್ತ್ರೀಶಕ್ತಿ ಸಂಘ, ಯುವಕ ಮಂಡಳಿಗಳು ಗ್ರಾಮದ ಗುರು-ಹಿರಿಯರು ಹಾಗೂ ಸಾರ್ವಜನಿಕರು ಇದರಲ್ಲಿ ಭಾಗವಹಿಸಲಿದ್ದಾರೆ.
ಮೆರವಣಿಗೆಯಲ್ಲಿ 25ಕ್ಕೂ ಅಧಿಕ ಕಲಾ ತಂಡಗಳ ಭಾಗಿಯಾಗಲಿವೆ:ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಯ ಕಲಾ ತಂಡಗಳು ಭಾಗವಹಿಸಲಿದ್ದು ಇದರಲ್ಲಿ,ಪೂಜಾ ಕುಣಿತ, ಪಟ ಕುಣಿತ, ಮಹಿಳಾ ವೀರಗಾಸೆ, ಮಹಿಳಾ ಚಂಡೆ ವಾದ್ಯ, ಚಿಲಿಪಿಲಿ ಗೊಂಬೆ, ನಂದಿಧ್ವಜ, ಜಗ್ಗಲಿಗೆ, ಕರಡಿ ಮಜಲು, ಜಾಂಜ್‍ಮೇಳ, ಡೊಳ್ಳು ಕುಣಿತ, ನಂದಿಕೋಲು, ಕೀಲು ಕುದುರೆ, ಕೋಲಾಟ ಜರುಗಲಿವೆ.