ಗದಗ: ಕೆಇಬಿ ಸಿಬ್ಬಂದಿಯೊಬ್ಬರು ಹರಿಯುವ ನೀರಿನಲ್ಲಿ ಈಜಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿರುವ ಘಟನೆ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ನಡೆಯಿತು. ಗ್ರಾಮದಲ್ಲಿ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಗ್ರಾಮಕ್ಕೆ ನೀರು ಪೂರೈಸುವ ಉದ್ದೇಶಕ್ಕೆ ವಿದ್ಯುತ್ ಸರಬರಾಜು ಮಾಡುವ ಟ್ರಾನ್ಸ್ಫಾರ್ಮರ್ಗಳು ಮುಳುಗು ಭೀತಿ ಎದುರಿಸುತ್ತಿದ್ದವು.
ಈ ಸಂದರ್ಭದಲ್ಲಿ ಟ್ರಾನ್ಸ್‌ಫಾರ್ಮರ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಅನಿವಾರ್ಯತೆ ಇತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪವರ್‌ಮ್ಯಾನ್ ಮಂಜುನಾಥ ಕುಂಬಾರ, ಸುಮಾರು 30 ಅಡಿ ದೂರ ನೀರಿನಲ್ಲಿ ಈಜಿ ಟ್ರಾನ್ಸ್‌ಫಾರ್ಮರ್ ಸ್ಥಳ ತಲುಪಿದರು. ಸೂಕ್ತ ಸಮಯದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹಿಂತಿರುಗಿದರು.
ಕೆಇಬಿ ಸಿಬ್ಬಂದಿ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ಟ್ರಾನ್ಸ್‌ಫಾರ್ಮರ್ ವಿದ್ಯುತ್ ಸ್ಥಗಿತಗೊಳಿಸಿದಾಗ ಅದರ ಮುಂದಿನ ಟ್ರಾನ್ಸ್‌ಫಾರ್ಮರ್ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ನೀರು ಸರಬರಾಜು ವ್ಯವಸ್ಥೆಗೆ ಯಾವುದೇ ತೊಂದರೆಯಾಗುವುದಿಲ್ಲ. ಮಂಜುನಾಥ್ ಕಾರ್ಯಕ್ಕೆ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಟ್ರಾನ್ಸ್‌ಫಾರ್ಮರ್ ಸಂಪರ್ಕ ಕಡಿತಗೊಳಿಸಿದಿದ್ದರೆ ಕುಡಿಯುವ ನೀರು ಸರಬರಾಜು ವ್ಯವಸ್ಥೆಗೆ ತೊಂದರೆಯಾಗುತ್ತಿತ್ತು. ಪ್ರತಿ ಬಾರಿ ಮಳೆ ಹೆಚ್ಚಾಗಿ ನದಿ ಉಕ್ಕಿ ಹರಿದಾಗಲೂ ಈ ಸಮಸ್ಯೆ ಸಾಮಾನ್ಯ. ಸಾರ್ವಜನಿಕರಿಗೆ ಕುಡಿಯುವ ನೀರಿನ ಸರಬರಾಜಿಗೆ ತೊಂದರೆ ಆಗಬಾರದೆಂಬುದು ಇಲಾಖೆಯ ಕಳಕಳಿ. ಹೀಗಾಗಿ ಅಪಾಯ ಎದುರಿಸಿದೆ ಎಂದು ಮಂಜುನಾಥ್ ಹೇಳಿದರು.
ಇದನ್ನೂ ಓದಿ:ಕೆರೆಯಲ್ಲಿರುವ ವಿದ್ಯುತ್ ಕಂಬಗಳ ದುರಸ್ತಿ: ಬೆಸ್ಕಾಂ ನೌಕರರ ಪರದಾಟ