ಗದಗ: ಕೊರೊನಾ ನಿರ್ಮೂಲನೆಗೆ ಗ್ರಾಮ ಪಂಚಾಯತಿಯೊಂದು ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಿದೆ. ಈಗಾಗಲೇ ರಾಜ್ಯದಲ್ಲಿ ಹಲವು ಗ್ರಾಮ ಪಂಚಾಯತಿಗಳು ಕೊರೊನಾ ನಿರ್ಮೂಲನೆಗೆ ವಿನೂತನ ಕಾರ್ಯಗಳನ್ನ ಮಾಡಿ ಮಾದರಿ ಎನಿಸಿಕೊಂಡಿವೆ.
ಅದೇ ರೀತಿ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮ ಪಂಚಾಯತಿ ಸಹ ಕೊರೊನಾ ತಡೆಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಗ್ರಾಮದ ಪ್ರತಿ ಚಹಾದ ಅಂಗಡಿಗೆ ಬರುವ ಗ್ರಾಹಕರಿಗೆ ಉಚಿತ ಕಷಾಯ ನೀಡಲು ಮುಂದಾಗಿದ್ದಾರೆ. ಈ ಪ್ರಯತ್ನವೇನು ಹೇಳಿಕೊಳ್ಳುವಷ್ಟು ಹೊಸದಾಗಿ ಅಲ್ಲದೇ ಇದ್ದರೂ ಗ್ರಾಮ ಪಂಚಾಯತಿ ಆಸಕ್ತಿ ಹಾಗೂ ಜನರ ಸಹಕಾರ ಇಲ್ಲಿ ಪ್ರಮುಖವಾಗಿದೆ. ಈ ಬಗ್ಗೆ ಚಹಾ ಅಂಗಡಿ ಮಾಲೀಕರ ಸಭೆ ಕರೆದು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ.
ಕೊರೊನಾ ತಡೆಗಟ್ಟುವಿಕೆಗೆ ಕಷಾಯ ಸೇವನೆ ಒಳ್ಳೆಯದು ಎಂಬ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಕೋವಿಡ್ ಕಾರ್ಯಪಡೆ ಕೊರೊನಾ ತಡೆಯಲು ಈ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಪ್ರತಿ ಚಹಾ ಅಂಗಡಿಯಲ್ಲಿ ಉಚಿತವಾಗಿ ಕಷಾಯ ವಿತರಣೆಯನ್ನು ಪಂಚಾಯತಿ ಸಿಬ್ಬಂದಿ ಅಂಗಡಿಗಳಿಗೆ ತೆರಳಿ ಪರಿಶೀಲಿಸಲಿದ್ದಾರೆ.