ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತ್ತಗುಡ್ಡ ವನ್ಯಜೀವಿ ಧಾಮದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಅಪರೂಪದ ಪ್ರಾಣಿಗಳು-ಪಕ್ಷಿಗಳು ಕಂಡುಬಂದಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ದೀಪಿಕಾ ಬಾಜ್‌ಪೈ ಮಾಹಿತಿ ನೀಡಿದ್ದಾರೆ.
ಗದಗ ಜಿಲ್ಲೆಯ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರುವರೆಗೆ ಚಾಚಿಕೊಂಡಿರುವ ಕಪ್ಪತ್ತಗುಡ್ಡವು ಜಿಲ್ಲೆಯ ಉತ್ತರದಿಂದ ದಕ್ಷಿಣಕ್ಕೆ ಸುಮಾರು 65 ಕಿ.ಮೀ.ಗಳಷ್ಟು ಉದ್ದಕ್ಕೆ ಕವಲು-ಕವಲಾಗಿ ಹರಡಿಕೊಂಡಿದೆ. ಇದು ಸಣ್ಣಪುಟ್ಟ ಗುಡ್ಡಗಳ ಸಾಲುಗಳಿಂದ ಕೂಡಿದ್ದು, ಈ ಗುಡ್ಡಗಳು ಸುಮಾರು 2 ಕಿ.ಮೀ.ಯಿಂದ 10 ಕಿ.ಮೀ.ಗಳಷ್ಟು ಅಗಲವಾಗಿದೆ.
ಸಮುದ್ರ ಮಟ್ಟದಿಂದ ಸುಮಾರು 1005 ಮೀ. ಎತ್ತರದಲ್ಲಿದೆ. ಅಲ್ಲದೇ ಈ ಪ್ರದೇಶವು 244.5 ಚ.ಕಿ.ಮೀ. ವ್ಯಾಪಿಸಿದೆ. ಪ್ರಮುಖವಾಗಿ ಸೂಜಿ ಮಡ್ಡಿ, ಕೆಂಪ ಗುಡ್ಡ, ಗಾಳಿ ಗುಂಡಿ, ಎತ್ತಿನ ಗುಡ್ಡ, ಆನೆ ಸೊಂಡಿಲು, ಉಪ್ಪಿನ ಪಡಿ, ಮಂಜಿನ ಗುಡ್ಡ, ಮಜ್ಜಿಗೆ ಬಸವಣ್ಣ ಗುಡ್ಡ ಸೇರಿದಂತೆ ಹಲವು ಹೆಸರಿನ ಗುಡ್ಡಗಳನ್ನು ಹೊಂದಿದೆ. ವಿಶಾಲವಾಗಿ ಹರಡಿಕೊಂಡಿರುವ ಈ ಗುಡ್ಡಗಳಲ್ಲಿ ಹತ್ತಾರು ವನ್ಯ ಪ್ರಾಣಿ-ಪಕ್ಷಿಗಳು, ಔಷಧಿ ಸಸ್ಯಗಳು ಮತ್ತು ಬಗೆ ಬಗೆಯ ಪ್ರಭೇದಗಳ ಮರಗಳು ಕಂಡು ಬಂದ ಹಿನ್ನೆಲೆಯಲ್ಲಿ ಕಪ್ಪತ್ತಗುಡ್ಡವನ್ನು ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲಾಗುತ್ತದೆ.
ಈ ಸಂಪತ್ತನ್ನು ಪರಿಗಣಿಸಿ ಸರ್ಕಾರವು ಮೇ 16, 2019ರಂದು ಕಪ್ಪತ್ತಗುಡ್ಡ ವನ್ಯಜೀವಿ ಧಾಮವೆಂದು ಘೋಷಿಸಿತು. ಘೋಷಣೆ ಬಳಿಕ ಸಸ್ಯ ಹಾಗೂ ವನ್ಯಜೀವಿಗಳ ಸಂತತಿ ಹೆಚ್ಚಾಗಿದೆ. ಆದರೆ, ಈ ವನ್ಯಜೀವಿ ಧಾಮವು ಇಷ್ಟೆಲ್ಲ ವಿಶೇಷತೆಗಳಿಂದ ಕೂಡಿದ್ದರೂ ಸಹ ಇಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ನೆಲೆಯನ್ನು ಕಂಡುಹಿಡಿಯಲು ಯಾವುದೇ ವೈಜ್ಞಾನಿಕ ಅಧ್ಯಯನಗಳು ಇಲ್ಲಿಯವರೆಗೂ ನಡೆದಿರಲ್ಲಿಲ್ಲ. ಈ ನಿಟ್ಟಿನಲ್ಲಿ ಕಪ್ಪತ್ತಗುಡ್ಡವನ್ನು ಮೇ 07ರಿಂದ ಜುಲೈ 15ರವರೆಗೆ ಸೈನ್ ಸರ್ವೆ ವಿಧಾನದಲ್ಲಿ 128 ಕಿ.ಮೀ. ಸಂಚರಿಸಿ ವನ್ಯಜೀವಿಧಾಮದಲ್ಲಿ ಸರ್ವೆ ನಡೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.