ಕರ್ನಾಟಕ

karnataka

ETV Bharat / state

ವಿದೇಶಿ ಹಕ್ಕಿಗಳ ರಕ್ಷಣೆಗಾಗಿ ಅರಣ್ಯ ಇಲಾಖೆ ಹೊಸ ಹೆಜ್ಜೆ: ಕಪ್ಪತಗುಡ್ಡದ ಸೌಂದರ್ಯಕ್ಕೆ ಮತ್ತಷ್ಟು ಮೆರಗು - kappatagudda wildlife sanctuary

ಇತ್ತೀಚಿಗೆ ಸುರಿದ ಮಳೆಯಿಂದ ಶಿರಹಟ್ಟಿ ತಾಲೂಕಿನ ಶೆಟ್ಟಿಕೇರಿ ಕೆರೆ ಭರ್ತಿಯಾಗಿದ್ದು, ಪ್ರಕೃತಿ ಪ್ರಿಯರ ಕಣ್ಣಿಗೆ ಮುದ, ಮನಸ್ಸಿಗೆ ಖುಷಿ ನೀಡುತ್ತಿದೆ. ಈ ಹಿನ್ನೆಲೆ ಕೆರೆ ಅಭಿವೃದ್ಧಿಯ ಜೊತೆ ಜೊತೆಗೆ ಹಕ್ಕಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೆರೆ ಸುತ್ತಲೂ ಬಿದಿರು ನೆಡುವ ಹೊಸ ಯೋಜನೆಗೆ ಕೈ ಹಾಕಿದೆ.

Kappattagudda Beauty is Increased
ಕಪ್ಪತಗುಡ್ಡದ ಸೌಂದರ್ಯ ಹೆಚ್ಚಿಸಲು ಅರಣ್ಯ ಇಲಾಖೆಯ ಹೊಸ ಯೋಜನೆ

By

Published : Oct 8, 2020, 7:37 PM IST

ಗದಗ :ಔಷಧ ಸಸ್ಯಗಳ ಕಾಶಿ, ಜೀವ ವೈವಿಧ್ಯತೆಯ ತಾಣ, ಅಪಾರ ವನ್ಯ ಜೀವಿಗಳ ಆಶ್ರಯದ ಗೂಡು ಕಪ್ಪತಗುಡ್ಡ ಈಗ ವನ್ಯಧಾಮವಾಗಿ ಘೋಷಣೆಯಾಗಿದ್ದು, ಪರಿಸರ ಪ್ರಿಯರಲ್ಲಿ ಸಂಭ್ರಮ ಮನೆ ಮಾಡಿದೆ. ಎತ್ತ ನೋಡಿದರತ್ತ ಹಸಿರಿನಿಂದ ಕಂಗೊಳಿಸುವ ಈ ಪ್ರಕೃತಿಯ ಸೌಂದರ್ಯ ದೇವತೆಯ ಮತ್ತಷ್ಟು ಅಂದವನ್ನು ಹೆಚ್ಚಿಸಲು ಅರಣ್ಯ ಇಲಾಖೆ ಹೊಸ ಹೊಸ ಯೋಜನೆ ಹಾಕಿಕೊಂಡಿದೆ.

ಕಪ್ಪತಗುಡ್ಡದ ಸಮೀಪದಲ್ಲಿರುವ ಕೆರೆಯೊಂದು ಸೌಂದರ್ಯ ದೇವತೆಯ ಸೊಬಗು ಹೆಚ್ಚಿಸಿದ್ದು, ಈ ಕೆರೆ ಅಭಿವೃದ್ಧಿಪಡಿಸುವಲ್ಲಿ ಅರಣ್ಯ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ. ವಿದೇಶಿ ಹಕ್ಕಿಗಳ ಆಗಮನದಿಂದ ಈ ಕೆರೆ ಇತ್ತೀಚಿಗೆ ಫೇಮಸ್ ಆಗಿದ್ದು, ಪರಿಸರ ಪ್ರಿಯರನ್ನು ಸೆಳೆಯುತ್ತಿದೆ.

ಕಪ್ಪತಗುಡ್ಡದ ಸೌಂದರ್ಯ ಹೆಚ್ಚಿಸಲು ಅರಣ್ಯ ಇಲಾಖೆಯ ಹೊಸ ಯೋಜನೆ

ಇತ್ತೀಚಿಗೆ ಸುರಿದ ಮಳೆಯಿಂದ ಶಿರಹಟ್ಟಿ ತಾಲೂಕಿನ ಶೆಟ್ಟಿಕೇರಿ ಕೆರೆ ಭರ್ತಿಯಾಗಿದ್ದು, ಪ್ರಕೃತಿ ಪ್ರಿಯರ ಕಣ್ಣಿಗೆ ಮುದ, ಮನಸ್ಸಿಗೆ ಖುಷಿ ನೀಡುತ್ತಿದೆ. ಈ ಹಿನ್ನೆಲೆ ಕೆರೆ ಅಭಿವೃದ್ಧಿಯ ಜೊತೆ ಜೊತೆಗೆ ಹಕ್ಕಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಕೆರೆ ಸುತ್ತಲೂ ಬಿದಿರು ನೆಡುವ ಹೊಸ ಯೋಜನೆಗೆ ಕೈ ಹಾಕಿದೆ.

ಅಂದಾಜು 234 ಎಕರೆ ವಿಶಾಲ ವ್ಯಾಪಿ ಹೊಂದಿರುವ ಈ ಕೆರೆ ನೀರಾವರಿಗೂ ಯೋಗ್ಯವಾಗಿತ್ತು. ಕೊಳವೆ ಬಾವಿಯ ಹಾವಳಿ ಬರುವ ಮೊದಲು ಕೆರೆಯ ನೀರಿನಿಂದ ಶೆಟ್ಟಿಕೇರಿ, ಕುಂದ್ರಳ್ಳಿ, ಚನ್ನಪಟ್ಟಣ ಗ್ರಾಮಗಳ ರೈತರು ನೀರಾವರಿ ಮಾಡುತ್ತಿದ್ದರು. ಈಗಲೂ ಕೆರೆ ನೀರು ಹರಿಸಲು ಸಣ್ಣ ಸಣ್ಣ ಕಾಲುವೆಗಳು ಇರುವುದನ್ನು ಕಾಣಬಹುದು. ಒಂದು ದಶಕದಿಂದ ವರುಣನ ಅವ ಕೃಪೆಯಿಂದ ಕೆರೆ ತುಂಬಿರಲಿಲ್ಲ. ಆದರೆ, ಕಳೆದ ವರ್ಷದಿಂದ ಉತ್ತಮ ಮಳೆ ಆಗುತ್ತಿದ್ದು, ಕೆರೆ ತುಂಬಿಕೊಂಡಿದೆ. ವಿಶೇಷ ಅಂದರೆ ಈಗ ಶೆಟ್ಟಿ ಕೆರೆ, ವಿದೇಶಿ ಹಕ್ಕಿಗಳ ಬೀಡಾಗಿರೋದು ಕಪ್ಪತಗುಡ್ಡದ ಸೌಂದರ್ಯಕ್ಕೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಿದೆ.

ಕಪ್ಪತಗುಡ್ಡದ ಸೌಂದರ್ಯ ಹೆಚ್ಚಿಸಲು ಅರಣ್ಯ ಇಲಾಖೆಯ ಹೊಸ ಯೋಜನೆ

ಮಾಗಡಿ ಕೆರೆಗೆ ಬರುವ ವಿದೇಶಿ ಪಕ್ಷಿಗಳು ಅಲ್ಲಿನ ಗದ್ದಲದ ವಾತಾವರಣ ಬಿಟ್ಟು ಶೆಟ್ಟಿಕೇರಿ ಕೆರೆಗೂ ಧಾವಿಸುತ್ತಿವೆ. ಪ್ರತಿವರ್ಷ ಸಾವಿರಾರು ಪಕ್ಷಿಗಳು ಈ ಕೆರೆಯಲ್ಲಿ ವಿಹರಿಸುತ್ತವೆ. ಸುತ್ತಲೂ ಗುಡ್ಡ ಹಾಗೂ ಅರಣ್ಯ ಇಲಾಖೆಗೆ ಸೇರಿದ ನೀಲಗಿರಿ ನೆಡುತೋಪಿನ ಮಧ್ಯ ಕೆರೆ ಇರುವುದು ವಲಸೆ ಪಕ್ಷಿಗಳಿಗೆ ಅತ್ಯುತ್ತಮ ಸ್ಥಳವಾಗಿ ಮಾರ್ಪಟ್ಟಿದೆ ಎನ್ನುತ್ತಾರೆ ಸ್ಥಳೀಯ ಕುಮಾರ್.

ಕೆರೆಯಲ್ಲಿ ಸ್ವಚ್ಛಂದವಾಗಿ ವಿಹರಿಸುವ ವಿದೇಶಿ ಪಕ್ಷಿಗಳನ್ನು ಬೇಟೆಯಾಡಲು ಕೆಲವರು ಹೊಂಚು ಹಾಕುತ್ತಿದ್ದರು. ಕೆರೆ ಖಾಲಿ ಆದಾಗ ಚೆನ್ನಪಟ್ಟಣ ಮತ್ತು ಅಕ್ಕಿಗುಂದ ತಾಂಡಾ ಕಡೆಯಿಂದ ಕೆರೆಯಲ್ಲಿನ ಮರಳನ್ನು ಕದ್ದು ಸಾಗಿಸುವ ದಂಧೆ ಎಗ್ಗಿಲ್ಲದೆ ನಡೆಯುತ್ತಿತ್ತು. ಇಲ್ಲಿ ಮೀನು ಸಾಕಣೆ ಜೋರಾಗಿತ್ತು. ಚಳಿಗಾಲದಲ್ಲಿ ಬೇರೆ ಬೇರೆ ದೇಶಗಳಿಂದ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಹಾಗಾಗಿ ಕೆಲವು ದುಷ್ಟರು ಅವುಗಳನ್ನು ಬೇಟೆ ಆಡಲು ಹೊಂಚು ಹಾಕಿ ಕುಳಿರುವ ಮಾಹಿತಿ ಬಂದಿತ್ತು. ಈ ಎಲ್ಲ ಅಂಶಗಳನ್ನ ಮನಗಂಡ ಅರಣ್ಯ ಇಲಾಖೆಯು ಸುತ್ತಲೂ ಬಿದಿರು ಸಶಿ ನಡೆಸುವ ಯೋಜನೆ ಹಾಕಿಕೊಂಡಿದೆ. ಕೆರೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸುತ್ತಲೂ 20 ಸಾವಿರ ಬಿದಿರು ಸಸಿಗಳನ್ನು ನೆಡೆಸಲಾಗುತ್ತಿದ್ದು ಈ ಪ್ರಮಾಣದ ಬಿದಿರು ಬೆಳೆದರೆ ಕೆರೆ ಸಂರಕ್ಷಣೆಯೊಂದಿಗೆ ಪಕ್ಷಿಗಳ ರಕ್ಷಣೆಯೂ ಆಗುತ್ತದೆ. ಪ್ರವಾಸಿಗರನ್ನು ಸೆಳೆಯಬಹುದು ಎನ್ನುತ್ತಾರೆ ಡಿಎಫ್​​​ಒ ಸೂರ್ಯಸೇನ್.

ಕಪ್ಪತಗುಡ್ಡದ ಸೌಂದರ್ಯ ಹೆಚ್ಚಿಸಲು ಅರಣ್ಯ ಇಲಾಖೆಯ ಹೊಸ ಯೋಜನೆ

ಡಿಸೆಂಬರ್ ತಿಂಗಳಲ್ಲಿ ಇಲ್ಲಿಗೆ ಸಾಕಷ್ಟು ವಿದೇಶಿ ಹಕ್ಕಿಗಳು ಬರುತ್ತವೆ. ಹಿಂಡು ಹಿಂಡಾಗಿರುವ ಹಕ್ಕಿಗಳನ್ನು ನೋಡಲೆಂದೇ ಸಾವಿರಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಜೊತೆಗೆ ಪರಿಸರ ಪ್ರಿಯರ ಖುಷಿಯನ್ನ ಇಮ್ಮಡಿಗೊಳಿಸಿದೆ. ಜಿಲ್ಲೆಯಲ್ಲಿ ಮಾಗಡಿ ಕೆರೆ ಜೊತೆಗೆ ಶೆಟ್ಟಿ ಕೆರೆಯನ್ನೂ ಸಹ ಇನ್ನಷ್ಟು ಅಭಿವೃದ್ಧಿಗೊಳಿಸಿದರೆ ಕಪ್ಪತಗುಡ್ಡದ ಅಂಚಿಗೆ ಹೊಂದಿಕೊಂಡಿರುವ ಕೆರೆ ಪ್ರಸಿದ್ಧಿ ಕೆರೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ABOUT THE AUTHOR

...view details