ಕರ್ನಾಟಕ

karnataka

ETV Bharat / state

ಗದ್ದುಗೆ ವಿವಾದದ ನಡುವೆಯೂ ನೆರವೇರಿದ ಶಿವಾನಂದ ಬೃಹನ್ಮಠದ ಜಾತ್ರಾ ಮಹೋತ್ಸವ - ಗದಗ

ಗದ್ದುಗೆ ವಿವಾದದ ನಡುವೆಯೂ ಶಿವಾನಂದ ಬೃಹನ್ಮಠದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿದೆ.

Jatra Mahotsava in Gadag Shivanand Math
ಶಿವಾನಂದ ಬೃಹನ್ಮಠದ ಜಾತ್ರಾ ಮಹೋತ್ಸವ

By

Published : Feb 20, 2023, 2:25 PM IST

ಶಿವಾನಂದ ಬೃಹನ್ಮಠದ ಜಾತ್ರಾ ಮಹೋತ್ಸವ..

ಗದಗ:ಶಿವಾನಂದ ಬೃಹನ್ಮಠದ ಉತ್ತರಾಧಿಕಾರಿ ವಿವಾದದ ನಡುವೆಯೂ ಜಗದ್ಗುರು ಶ್ರೀ ಶಿವಾನಂದ ಸ್ವಾಮೀಜಿಗಳ ರಥೋತ್ಸವ ಅದ್ದೂರಿಯಾಗಿ ನೆರವೇರಿದೆ. ಸುಮಾರು ಎರಡು ಮೂರು ತಿಂಗಳಿಂದ ವಿವಾದದ ಸುಳಿಯಲ್ಲಿ ಸಿಲುಕಿದ್ದ ಶಿವಾನಂದ ಮಠದ ಜಾತ್ರೆ ಹೇಗೆ ನಡೆಯುತ್ತದೆ ಎಂಬ ಕುತೂಹಲಕ್ಕೆ ಸದ್ಯ ತೆರೆ ಬಿದ್ದಿದೆ. ಕಿರಿಯ ಸ್ವಾಮೀಜಿ ಸದಾಶಿವಾನಂದ ಭಾರತಿ ಶ್ರೀ ಅವರನ್ನು ಉತ್ತರಾಧಿಕಾರಿ ಸ್ಥಾನದಿಂದ ತೆಗೆಯಲಾಗಿದೆ ಎಂಬ ವಿಚಾರದಿಂದ ಶುರುವಾಗಿದ್ದ ವಿವಾದ ಕೋರ್ಟ್ ಮೆಟ್ಟಿಲೇರಿತ್ತು.

ಮಧ್ಯಂತರ ತೀರ್ಪಿನಲ್ಲಿ ಕಿರಿಯ ಸ್ವಾಮೀಜಿ ಸದಾಶಿವಾನಂದ ಭಾರತಿ ಶ್ರೀಗೆ ಹಿನ್ನೆಡೆಯಾಗಿದೆ. ಮಠದ ಎಲ್ಲ ಜವಾಬ್ದಾರಿಯನ್ನು ನನ್ನ ಮೂಲಕವೇ ನಡೆಸಬೇಕು ಎಂದು ಕೋರ್ಟ್ ಆದೇಶ ಮಾಡಿದೆ ಎಂದು ಹಿರಿಯ ಶ್ರೀ ಅಭಿನವ ಸ್ವಾಮೀಜಿ ಹೇಳಿದ್ದರು. ಅಂದಿನಿಂದ ರಥೋತ್ಸವ ಮತ್ತು ಅಡ್ಡಪಲ್ಲಕ್ಕಿಯಲ್ಲಿ ಕೂರವರು ಯಾರು ಎಂಬುದೇ ಪ್ರಶ್ನೆ ಮೂಡಿತ್ತು. ಇದೇ ವಿಚಾರವಾಗಿ ಇಬ್ಬರೂ ಸ್ವಾಮೀಜಿ ಮತ್ತು ಬೆಂಬಲಿಗರ ನಡುವೆ ಜಟಾಪಟಿ ಶುರುವಾಗಿ ನಾನಾ ನೀನಾ? ಎಂಬ ಜಿದ್ದಿಗೆ ಬಿದ್ದಿದ್ದರು.

ಅಲ್ಲದೇ ರಥೋತ್ಸವ ಮತ್ತು ಅಡ್ಡಪಲ್ಲಕ್ಕಿಯ ಮೇಲೆ ನಾನು ಕೂರುತ್ತೇನೆ. ನನ್ನ ಮೂಲಕವೇ ಜಾತ್ರೆ ನಡೆಯುತ್ತದೆ ಎಂದು ಕಿರಿಯ ಶ್ರೀ ಸಹ ಸವಾಲು ಹಾಕಿದ್ದರು. ಹೀಗಾಗಿ ನಿನ್ನೆ(ಭಾನುವಾರ) ನಡೆದ ಜಾತ್ರೆಯಲ್ಲಿ 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಾನೂನು ಸುವ್ಯವಸ್ಥೆಗೆ ನಿಯೋಜನೆಗೊಂಡಿದ್ದರು.

ಇದನ್ನೂ ಓದಿ:ಸಿರಿಗೆರೆ ಬೃಹನ್ಮಠಕ್ಕೆ ಉತ್ತಾರಾಧಿಕಾರಿ ಆಯ್ಕೆ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆದಿದೆ : ಶಾಮನೂರು ಶಿವಶಂಕರಪ್ಪ

ಇಲ್ಲಿ ಕೋರ್ಟ್ ಆದೇಶ ಪಾಲನೆಯಾಗಬೇಕಿದೆ. ಹಾಗಾಗಿ ಯಾರೂ ಕಾನೂನು ವಿರುದ್ಧ ನಡೆಯ ಬಾರದು ಎಂದು ಇಬ್ಬರು ಶ್ರೀಗಳಲ್ಲಿ ಪೊಲೀಸರು ಮನವಿ ಮಾಡಿದ್ದರು. ಜತೆಗೆ ಇಬ್ಬರೂ ಸ್ವಾಮೀಜಿ ಬೆಂಬಲಿಗರ ಮನವೊಲಿಸಿ ಜಾತ್ರೆ ಸುಸೂತ್ರವಾಗಿ ನಡೆಯುವಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಹೀಗಾಗಿ ಮಧ್ಯಾಹ್ನ 3 ಗಂಟೆಗೆ ಅಡ್ಡಪಲ್ಲಕ್ಕಿ ಉತ್ಸವ ಹಿರಿಯ ಶ್ರೀ ಅಭಿನವ ಸ್ವಾಮೀಜಿ ನೇತೃತ್ವದಲ್ಲಿಯೇ ನಡೆಯಿತು. ಜತೆಗೆ ಸಾಯಂಕಾಲ ನಡೆದ ಅದ್ಧೂರಿ ರಥೋತ್ಸವ ಸಹ ಹಿರಿಯ ಶ್ರೀಗಳ ನೇತೃತ್ವದಲ್ಲಿಯೇ ನಡೆದು ಜಾತ್ರೆ ಯಶಸ್ವಿಯಾಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಪೊಲೀಸರ ಬಿಗಿ ಬಂದೋಬಸ್ತ್​​ನಲ್ಲಿ ಜಾತ್ರೆ ಪೂರ್ಣಗೊಂಡಿದೆ.

ಇನ್ನು ಇಷ್ಟೆಲ್ಲ ಸಂಭ್ರಮ ‌ನಡೆಯುತ್ತಿದ್ದರೂ ಕಿರಿಯ ಶ್ರೀ ಸದಾಶಿವಾನಂದ ಶ್ರೀ ಮಾತ್ರ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಕೋಣೆ ಬಿಟ್ಟು ಹೊರಗಡೆ ಬರಲಿಲ್ಲ. ಜತೆಗೆ ಯಾವುದೇ ಪ್ರತಿಕ್ರಿಯೆ ಸಹ ನೀಡಿಲ್ಲ. ಸದ್ಯ ಮಠದಲ್ಲಿ ಎಲ್ಲ ಪೂಜೆ ಕೈ‌ಂಕರ್ಯಗಳು, ಮಂತ್ರಪಠಣಗಳು ಸರಾಗವಾಗಿ ನಡೆದಿವೆ. ಇನ್ನು ಜಾತ್ರೆ ಯಶಸ್ವಿಯಾಗಿ ನೆರವೇರಿದ್ದಕ್ಕೆ ಹಿರಿಯ ಸ್ವಾಮೀಜಿ ಅಭಿನವ ಶ್ರೀ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ತಿಂಗಳಿಂದ ಕೆಲವು ವಿಘ್ನಗಳು ಎದುರಾಗಿದ್ದವು. ಸದ್ಯ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಜಾತ್ರೆ ಯಶಸ್ವಿಯಾಗಿದ್ದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:ಜೋಡಿ ರಥೋತ್ಸವ: ಐತಿಹಾಸಿಕ ಭೋಗ ನಂದೀಶ್ವರ ರಥದ ಗಾಲಿ ಮುರಿದು ಅವಘಡ

ABOUT THE AUTHOR

...view details