ಗದಗ: "ನರಗುಂದದಲ್ಲಿ ನನ್ನ ಸಂಬಂಧಿಕರು ಹಲವರಿದ್ದಾರೆ. ಅನೇಕ ಬಾರಿ ಇಲ್ಲಿಗೆ ಬಂದಿದ್ದೇನೆ. ಅಂದು ಬಿಜೆಪಿ ನಾಯಕನಾಗಿ ಬರ್ತಿದ್ದೆ. ಇಂದು ಕಾಂಗ್ರೆಸ್ ನಾಯಕನಾಗಿ ಬಂದಿದ್ದೇನೆ" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ನರಗುಂದ ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್.ಯಾವಗಲ್ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, "30 ವರ್ಷ ತಪಸ್ಸು ಮಾಡಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೆ. ಅಂತಹ ವ್ಯಕ್ತಿಯನ್ನು ಒತ್ತಾಯಪೂರ್ವಕವಾಗಿ ಹೊರಗೆ ಹಾಕಿದ್ರು. ಅವರದ್ದು ಹಿಡನ್ ಅಜೆಂಡಾ. ಷಡ್ಯಂತ್ರ ಮಾಡಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಇಲ್ಲದಂತೆ ಮಾಡಿದ್ರು. ಏ. 12ನೇ ತಾರೀಖಿನಂದು ಚುನಾವಣಾ ಉಸ್ತುವಾರಿಗಳು ನನಗೆ ಕಾಲ್ ಮಾಡಿ ಹೇಳಿದಾಗ ಬಹಳ ಅಚ್ಚರಿ ಆಯ್ತು, ಜೊತೆಗೆ ಬೇಸರವಾಯ್ತು. ಜಗದೀಶ್ ಶೆಟ್ಟರ್ ಅವರೇ ಪಕ್ಷ ತೀರ್ಮಾನ ಮಾಡಿದೆ, ನಿಮಗೆ ಟಿಕೆಟ್ ಇಲ್ಲ, ನೀವು ತಕ್ಷಣವೇ ಪತ್ರಿಕಾ ಹೇಳಿಕೆ ಕೊಟ್ಟು ರಾಜಕೀಯ ನಿವೃತ್ತಿ ಆಗಬೇಕು. ಒಂದು ಲೆಟರ್ ಕಳಿಸಿ ಕೊಡ್ತೀನಿ, ಅದಕ್ಕೆ ಸಹಿ ಮಾಡಿ ಕಳಿಸಿ ಅಂದ್ರು. ಈ ರೀತಿ 30 ವರ್ಷದಿಂದ ಪಕ್ಷಕ್ಕಾಗಿ ದುಡಿದ ಲೀಡರ್ಗೆ ಅಪಮಾನ ಮಾಡೋದು ಎಷ್ಟು ಸರಿ?" ಎಂದು ವಾಗ್ದಾಳಿ ನಡೆಸಿದರು.
"10 ದಿನ ಮುಂಚೆಯೇ ಹೇಳಬಹುದಾಗಿತ್ತು, ಕರೆದು ಕೂರಿಸಿಕೊಂಡು ಮಾತನಾಡಬಹುದಾಗಿತ್ತು. ಗೌರವಯುತವಾಗಿ ಮಾತನಾಡಿಸಿದ್ದರೆ ನಾನು ಗೌರವಯುತವಾಗಿ ರಾಜಕೀಯ ನಿವೃತ್ತಿ ಆಗ್ತಿದ್ದೆ. ಬೆಳಗ್ಗೆ ಏಳು ಘಂಟೆಗೆ ಕಾಲ್ ಮಾಡಿ ಸಣ್ಣ ಹುಡುಗನಿಗೆ ಹೇಳಿದಂಗೆ ಹೇಳಿದಕ್ಕೆ ಬಹಳ ಬೇಜಾರು ಆಯ್ತು. ಯಾವ ಕಾರಣಕ್ಕಾಗಿ ನೀವು ಟಿಕೆಟ್ ಕೊಡೋದಿಲ್ಲ ಅಂತ ಕೇಳಿದೆ. 75 ವರ್ಷ ಆದವರಿಗೆ ಟಿಕೆಟ್ ಕೊಟ್ಟೀರಿ, ಜಗದೀಶ್ ಶೆಟ್ಟರ್ಗೆ ಯಾಕೆ ಇಲ್ಲ?, ನನ್ನ ಮೇಲೆ ಭ್ರಷ್ಟಾಚಾರದ ಕೇಸ್ಗಳು ಇದ್ದಾವಾ?. ಯಾವುದಾದರು ರೌಡಿ ಶೀಟರ್, ಕ್ರಿಮಿನಲ್ ಕೇಸ್ ಇದೆಯಾ?, ಯಾವುದೂ ಇಲ್ಲ. ಸಿಡಿ ಇದಾವೇನು ಅಂತಾ ಕೇಳಿದೆ. ಆರು ಜನ ಮಂತ್ರಿಗಳ ಸಿಡಿ ಇದಾವೆ. ಕೋರ್ಟ್ನಿಂದ ಸ್ಟೇ ತಂದಿದ್ದಾರೆ, ಅವರಿಗೆ ಟಿಕೆಟ್ ಕೊಟ್ಟಿದ್ದೀರಿ, ಜಗದೀಶ್ ಶೆಟ್ಟರ್ಗೆ ಯಾಕೆ ಇಲ್ಲ?" ಎಂದು ಪ್ರಶ್ನಿಸಿದೆ ಎಂದರು.