ಗದಗ: ಆ ವಿದ್ಯಾರ್ಥಿಗಳು ಪಶು ವೈದ್ಯಕೀಯ ಪದವಿ ಮುಗಿಸಿ ಡಾಕ್ಟರ್ ಆಗಬೇಕು, ಹೆತ್ತವರ ಆಸೆ ಈಡೇರಿಸಬೇಕು ಎಂಬ ಹತ್ತಾರು ಕನಸು ಕಂಡಿದ್ದಾರೆ. ಆದರೆ, ಪಶು ವೈದ್ಯಕೀಯ ಇಲಾಖೆ ನಿರ್ಲಕ್ಷ್ಯಕ್ಕೆ ಗದಗ ಪಶು ವೈದ್ಯಕೀಯ ಕಾಲೇಜಿನ ನೂರಾರು ವಿದ್ಯಾರ್ಥಿಗಳ ಭವಿಷ್ಯ ಈಗ ಅತಂತ್ರ ಸ್ಥಿತಿಯಲ್ಲಿದೆ.
ಸರ್ಕಾರದ ವಿರುದ್ಧ ಪಶುವೈದ್ಯಕೀಯ ವಿದ್ಯಾರ್ಥಿಗಳ ಆಕ್ರೋಶ ಹೌದು.. ಇನ್ನೇನು ಪದವಿ ಮುಗಿಸಿ ಹೊರ ಬರಬೇಕು ಅಂದುಕೊಂಡಿದ್ದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಕಾದಿದೆ. ಭಾರತೀಯ ಪಶು ವೈದ್ಯಕೀಯ ಪರಿಷತ್ ಅನುಮತಿಯೇ ಗದಗ ಪಶುವೈದ್ಯಕೀಯ ಕಾಲೇಜಿಗೆ ಸಿಕ್ಕಿಲ್ಲ. ಇದಕ್ಕೆ ಸರ್ಕಾರವೇ ಹೊಣೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಗದಗ ನಗರದ ಹೊಂಬಳ ರಸ್ತೆಯಲ್ಲಿರುವ ಪಶು ವೈದ್ಯಕೀಯ ಕಾಲೇಜಿನ ನೂರಾರು ವಿದ್ಯಾರ್ಥಿಗಳ ಭವಿಷ್ಯ ಇದೀಗ ಡೋಲಾಯಮಾನವಾಗಿದೆ. 2017ರಲ್ಲಿ ಅತ್ಯಾಧುನಿಕ ಕಟ್ಟಡದೊಂದಿಗೆ ಪಶು ವೈದ್ಯಕೀಯ ಕಾಲೇಜು ಆರಂಭವಾಗಿತ್ತು. ಆದರೆ, ಹೊಸ ಕಟ್ಟಡ ಅನ್ನೋದು ಬಿಟ್ಟರೆ ಇಲ್ಲಿ ಸರ್ಕಾರ ಯಾವುದೇ ಅನುದಾನ, ಮೂಲ ಸೌಕರ್ಯ ನೀಡಿಲ್ಲ. ಇಲ್ಲಿ ಪಶುಸಂಗೋಪನೆ ಇಲಾಖೆ ಬೇಜವಾಬ್ದಾರಿ ಎದ್ದು ಕಾಣುತ್ತಿದೆ. ಈ ಕಾಲೇಜಿಗೆ ಸರ್ಕಾರ ಅಗತ್ಯ ಉಪನ್ಯಾಸಕರನ್ನ ನೇಮಿಸಿಲ್ಲ. ಜಾನುವಾರು ಪ್ರಸೂತಿ ತಜ್ಞರು ಇಲ್ಲ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರ್ಯಾಕ್ಟಿಕಲ್ ಬಹು ಮುಖ್ಯ. ಆದರೆ ಪ್ರ್ಯಾಕ್ಟಿಕಲ್ ಮಾಡೋಕೆ ಅಗತ್ಯ ವ್ಯವಸ್ಥೆಯೂ ಇಲ್ಲ. ಹಾಗಾಗಿ ಪದವಿ ಮುಗಿದ ಮೇಲೆ ಮುಂದೆ ನಾವು ಸೇವೆ ಮಾಡೋದಾದರೂ ಹೇಗೆ ಎಂದು ವಿದ್ಯಾರ್ಥಿಗಳು ಕಳವಳಗೊಂಡಿದ್ದಾರೆ.
ಈ ಕಾಲೇಜಿನಲ್ಲಿ ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಬಡ ಹಾಗೂ ರೈತ ಕುಟುಂಬದಿಂದ ಬಂದಿದ್ದು, ಶಿಕ್ಷಣಕ್ಕಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದಾರೆ. ಪದವಿ ಮುಗಿದ ತಕ್ಷಣ ಸರ್ಕಾರ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಹೆತ್ತವರು ಮಾಡಿದ ಸಾಲ ತೀರಿಸುವ ಜವಾಬ್ದಾರಿ ಸಾಕಷ್ಟು ವಿದ್ಯಾರ್ಥಿಗಳ ಮೇಲಿದೆ. ಆದರೆ, ಭಾರತೀಯ ಪಶು ವೈದ್ಯಕೀಯ ಪರಿಷತ್ ಅನುಮತಿಯೇ ಕಾಲೇಜಿಗೆ ಇಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದು, ಇಲ್ಲಿ ಪಶು ವೈದ್ಯಕೀಯ ಪದವಿ ಮುಗಿಸಿದರೂ ಯಾವುದೇ ಪ್ರಯೋಜನವಿಲ್ಲ ಎನ್ನುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ, ಶಾಸಕ ಹೆಚ್.ಕೆ. ಪಾಟೀಲ ಹಾಗೂ ಕಾಲೇಜ್ ಡೀನ್ ಡಾ. ನಾಗರಾಜ್ ಹಾಗೂ ವಿದ್ಯಾರ್ಥಿಗಳ ತಂಡವು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಜೊತೆ ಸಭೆ ಮಾಡಿ ಒತ್ತಾಯಿಸಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ಈ ಬಗ್ಗೆ ಕಾಲೇಜ್ ಡೀನ್ ಅವರನ್ನು ಕೇಳಿದರೆ, 91 ಮಂದಿ ಉಪನ್ಯಾಸಕರು ಬೇಕಾಗಿದ್ದು, ಸರ್ಕಾರ ನೀಡಿದ್ದು ಕೇವಲ 28 ಜನ ಉಪನ್ಯಾಸಕರನ್ನ ಮಾತ್ರ. ಇನ್ನು ಪ್ರಯೋಗಾಲಯಗಳಲ್ಲಿ ಪ್ರಯೋಗಕ್ಕೆ ಬೇಕಾದ ಸೌಲಭ್ಯಗಳು ಇಲ್ಲ, ಅಗತ್ಯ ಕಟ್ಟಡ ಇಲ್ಲ. ಭಾರತೀಯ ಪಶು ವೈದ್ಯಕೀಯ ಪರಿಷತ್ ತಂಡ ಅನುಮತಿಗೆ ನಿರಾಕರಿಸಿತ್ತು. ಬಳಿಕ ಅಗತ್ಯ ಸೌಲಭ್ಯ ಒದಗಿಸುವುದಾಗಿ ಮನವೊಲಿಸಿದ ಬಳಿಕ ಮೂರು ಹಾಗೂ ನಾಲ್ಕನೇ ವರ್ಷದ ಪ್ರವೇಶಕ್ಕೆ ಅನುಮತಿ ನೀಡಿದೆ. ಆದರೆ ಇನ್ನು ಆ ಸಮಸ್ಯೆಗಳು ಹಾಗೇ ಇವೆ. ಸರ್ಕಾರದ ಮಟ್ಟದಲ್ಲಿ ಎಲ್ಲಾ ಪ್ರಯತ್ನ ನಡೆದಿವೆ. ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.