ಗದಗ :ಜಿಲ್ಲೆಯಲ್ಲಿ ಅಪರೂಪದ ಸಾಧಕರೊಬ್ಬರು ಕರ್ನಾಟಕ ರಾಜ್ಯ ಸರ್ಕಾರ ಕೊಡ ಮಾಡುವ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇವಲ 3ನೇ ತರಗತಿ ಓದಿರುವ ದೃಷ್ಟಿ ದೋಷವುಳ್ಳ ಸಾಹಿತಿ ರಾಮಣ್ಣ ಬ್ಯಾಟಿ ಅವರ ಕನ್ನಡದ ಸಾಹಿತ್ಯ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ 2020-21ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ಜಿಲ್ಲೆಯಲ್ಲಿ ಸಂಭ್ರಮದ ಮನೆ ಮಾಡಿದೆ.
ಕಣ್ಣು ಕಾಣದ, ಸ್ವಲ್ಪ ಮಟ್ಟಿಗೆ ಅನಕ್ಷರಸ್ಥರು ಸಹ ಆಗಿರುವ ಅಪರೂಪದ ಸಾಧಕರಾಗಿರುವ ರಾಮಣ್ಣ ಬ್ಯಾಟಿ ಛಂದಸ್ಸು, ಷಟ್ಪದಿಗಳ ಬಗ್ಗೆಯೂ ತಿಳಿದುಕೊಂಡಿದ್ದಾರೆ. ಯಾರೋ ಓದಿದ್ದನ್ನು ಕೇಳಿಸಿಕೊಂಡು, ಇನ್ಯಾರಿಗೋ ಬರೆಯಲು ಹೇಳಿ ಹತ್ತು-ಹಲವು ಪ್ರಸಿದ್ಧ ಗ್ರಂಥಗಳನ್ನು ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಅಪರೂಪದ ಸಾಧಕ ಎಂದೆನಿಸಿಕೊಂಡಿದ್ದಾರೆ. ಅಮೋಘವಾದ ನೆನಪಿನ ಶಕ್ತಿಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮದೇಯಾದ ಬರವಣಿಗೆ ಹೊಂದಿರುವ ರಾಮಣ್ಣ ಬ್ಯಾಟಿ ಪುರಾಣಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಇವರ ಈ ಅವಿಸ್ಮರಣೀಯ ಸಾಧನೆಯೇ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಹುಡಿಕೊಂಡು ಬಂದಿರುವುದಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು.
ಮೂಲತಃ ರಾಮದುರ್ಗ ತಾಲೂಕಿನ ಮನಿಹಾಳ ಸುರೇಬಾನ ಗ್ರಾಮದವರಾದ ರಾಮಣ್ಣ ಬ್ಯಾಟಿ, ಮಲಪ್ರಭಾ ನದಿಯ ಪ್ರವಾಹಕ್ಕೆ ತತ್ತರಿಸಿ ಅಲ್ಲಿಂದ ಸುಮಾರು 50 ವರ್ಷಗಳ ಹಿಂದೆಯೇ ಜಿಲ್ಲೆಗೆ ಆಗಮಿಸಿದ್ದಾರೆ. ಮೊದಲಿನಿಂದಲೂ ಸಾಹಿತ್ಯ ಅಭಿರುಚಿ ಹೊಂದಿದ್ದ ಅವರು ಪ್ರಾರಂಭದಲ್ಲಿ ಕೂಲಿ ಕೆಲಸ ಮಾಡುತ್ತಾ ಉಪಜೀವನ ನಡೆಸುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಸಾಹಿತ್ಯದ ಬಗ್ಗೆ ಗಮನ ನೀಡುತ್ತಿದ್ದರು. ಕ್ರಮೇಣ ತಮ್ಮದೇ ಶೈಲಿಯಲ್ಲಿ ಪ್ರಾಸಬದ್ಧವಾಗಿ ಕಾವ್ಯಗಳನ್ನು ರಚನೆ ಮಾಡಲು ಪ್ರಾರಂಭಿಸಿದರು. ಸಾಕಷ್ಟು ಕಾವ್ಯಗಳನ್ನು ಬರೆದು ಸಹ ಇಟ್ಟರು. ಆದರೆ, ಅವುಗಳು ಪ್ರಕಟಣೆಯಾಗದೇ ಹಾಗೇ ಉಳಿದಿದ್ದವು. ಹಾಗಾಗಿ ಒಂದು ದಿನ ತೋಂಟದಾರ್ಯ ಸ್ವಾಮಿಗಳನ್ನು ಭೇಟಿ ಮಾಡಿ ತಮ್ಮ ಸಾಹಿತ್ಯ ಕೃತಿಗಳನ್ನ ಅವರ ಮುಂದೆ ಅನಾವರಣ ಮಾಡಿದ್ದರು.
ಇವರ ಶಾಹಿತ್ಯಾಸಕ್ತಿ ಗುರಿತಿಸಿದ ಶ್ರೀಗಳು ಪ್ರೋತ್ಸಾಹ ನೀಡಿದ್ದರು. ಸಾಹಿತ್ಯದ ಕೃಷಿಯಲ್ಲಿ ಇನ್ನು ಮುಂದೆ ಹೋಗಿ ಸಾಧಿಸಿ ತೋರಿಸಬೇಕೆ ಎಂಬ ಛಲ ಹೊಂದಿದ್ದ ರಾಮಣ್ಣ, ಕೆವಿಎಸ್ಆರ್ ಕಾಲೇಜಿನ ಅಧ್ಯಾಪಕ ಅಲ್ಲಯ್ಯನವರ್ ಎಂಬುವರಿಂದ ಛಂದಸ್ಸು, ಷಟ್ಪದಿಗಳ ಬಗ್ಗೆಯೂ ತಿಳಿದುಕೊಳ್ಳುತ್ತಾರೆ. ಭಾಮಿನಿ ಷಟ್ಪದಿಯ ಅಭಿರುಚಿ ಹೆಚ್ಚಾಗಿದ್ದರಿಂದ ಅದರಲ್ಲಿ ಆಗ ಸಾಕಷ್ಟು ಕೃತಿಗಳನ್ನ ರಚನೆ ಮಾಡಿದ್ದಾರೆ.
ಅಪರೂಪದ ಸಾಧಕನಿಗೆ ಒಲಿದು ಬಂತು ರಾಜ್ಯೋತ್ಸವ ಪ್ರಶಸ್ತಿ ಇನ್ನು ಡಾ. ಬಿಆರ್ ಅಂಬೇಡ್ಕರ್ ಪುರಾಣ, ಸಿದ್ಧಲಿಂಗ ಕಾವ್ಯಸುಧೆ, ಶ್ರೀ ಗೌರಿ ಶಂಕರ ಚರಿತಾಮೃತ, ಬಾದಾಮಿ ಬನಶಂಕರಿ ಮಹಾತ್ಮೆ, ಶ್ರೀ ಶಿವಾನಂದ ಪುರಾಣ, ಸಂತ ಸೇವಾಲಾಲ್ ಪುರಾಣ ಸೇರಿದಂತೆ 50ಕ್ಕೂ ಗ್ರಂಥಗಳನ್ನು ರಚನೆ ಮಾಡುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅವಿಸ್ಮರಣೀಯ ಕೊಡುಗೆಯಾಗಿ ನೀಡಿದ್ದಾರೆ. ಭಾಮಿನಿ ಷಟ್ಪದಿ, ಚೌಪದಿ ಕಾವ್ಯ ಸೇರಿದಂತೆ ಗದ್ಯ-ಪದ್ಯ ರೂಪದಲ್ಲಿ ಗ್ರಂಥಗಳನ್ನು ರಚನೆ ಮಾಡಿದ್ದಾರೆ. ಅವರ ಸಾಧನೆ ಗುರುತಿಸಿ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಗದಗ- ಬೆಟಗೇರಿ ಅವಳಿ ನಗರಕ್ಕೆ ಸಂತಸ ತಂದಿದೆ ಅಂತಾರೆ ಸ್ಥಳೀಯರು.