ಗದಗ : ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರ ಉಸ್ತುವಾರಿ ಕ್ಷೇತ್ರದಲ್ಲಿ ಕಾನೂನುಗಳನ್ನು ಗಾಳಿಗೆ ತೂರಿರುವ ಮರಳು ದಂಧೆಕೋರರು ನದಿಯ ಒಡಲಿಗೆ ಕೈಹಾಕಿದ್ದಾರೆ.
ರಾಜ್ಯದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಕೊಟ್ಟಿದ್ದೇ ತಡ, ತುಂಗಭದ್ರಾ ನದಿಯಲ್ಲಿ ಜಿಸಿಬಿಗಳು ಘರ್ಜಿಸುತ್ತಿವೆ. ಇಷ್ಟು ದಿನ ಶಾಂತವಾಗಿ ಹರಿಯುತ್ತಿದ್ದ ನದಿಗಳಿಗೆ ಈಗ ಮತ್ತೆ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗುತ್ತಿದೆ. ಕಾನೂನು ಪ್ರಕಾರ, ನೀರಿನಲ್ಲಿ ಮರಳು ತೆಗೆಯುವಂತಿಲ್ಲ. ಆದರೆ ಕಾನೂನು ಆದೇಶವನ್ನು ನಿರ್ಲಕ್ಷಿಸಿರುವ ದಂಧೆಕೋರರು ನದಿಯ ಗರ್ಭಕ್ಕೆ ಕೈ ಹಾಕಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಜಿಲ್ಲೆಯ ಮುಂಡರಗಿ ತಾಲೂಕಿನ ಹೆಸರೂರು, ಸೀರನಳ್ಳಿ, ಗಂಗಾಪೂರ, ಕಕ್ಕೂರ, ಸಿಂಗಟಾಲೂರ, ಕೊರ್ಲಹಳ್ಳಿ ಗ್ರಾಮದ ಬಳಿಯ ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ಸಾಗಿದೆ. ಈ ಬಗ್ಗೆ ಪ್ರಶ್ನಿಸಬೇಕಾದ ಜಿಲ್ಲಾಡಳಿತ ಕಂಡು ಕಾಣದಂತಿದೆ. ಅಲ್ಲದೆ ಗಣಿ ಇಲಾಖೆ ನಿಗದಿ ಮಾಡಿದ್ದಕಿಂತ ಹೆಚ್ಚಾಗಿ ಜೆಸಿಬಿ ಹಾಗೂ ವಾಹನಗಳ ಬಳಕೆ ಮಾಡಿರೋ ಆರೋಪ ಕೇಳಿ ಬಂದಿದೆ.
ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೊಸ ಮರಳು ನೀತಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಿಂದ ಅಕ್ರಮ ಮರಳು ಗಣಿಗಾರಿಕೆ ತಡೆಯಲಾಗುತ್ತದೆ. ರಾಜ್ಯದಲ್ಲಿ ಅತೀ ಕಡಿಮೆ ದರಕ್ಕೆ ಮರಳು ದೊರೆಯುತ್ತದೆ. ಅದಕ್ಕಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿ ಮಾಡಲಾಗಿದೆ.
ಅಲ್ಲದೆ ತೆಲಂಗಾಣ ಮಾದರಿಯಲ್ಲಿ ಮರಳು ನೀತಿಯನ್ನು ಜಾರಿಗೊಳಿಸಲಾಗುತ್ತದೆ ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ. ಸಿ. ಪಾಟೀಲ್ ಹೇಳಿದ್ದರು. ಆದ್ರೆ ಅವರ ಜಿಲ್ಲೆಯಲ್ಲಿಯೇ ಅಕ್ರಮ ಮರಳು ದಂಧೆ ನಡೆಯುತ್ತಿರುವುದು ವಿಪರ್ಯಾಸ.